ಬೆಂಗಳೂರು : ವಿಧಾನಸಭೆ ಅಧಿವೇಶನದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಕೇಳಿದ್ದ ಚುಕ್ಕೆ ಗುರುತಿನ ಪ್ರಶ್ನೆಗೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಉತ್ತರ ನೀಡಿದ್ದಾರೆ.
ರಾಜ್ಯದಲ್ಲಿ ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶದ 7ನೇ ಕರಡು ಅಧಿಸೂಚನೆ ಹೊರಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಮತ್ತು ಸ್ಥಳೀಯ ಗ್ರಾಮ ನಿವಾಸಿಗಳು ಮತ್ತೊಮ್ಮೆ ಆತಂಕಕ್ಕೆ ಈಡಾಗಿರುವುದು ಗಮನಕ್ಕೆ ಬಂದಿದೆಯೇ ಎಂದು ಕೇಳಿದ್ದರು. ಆದರೆ, ಹಿಂದಿನ 6ನೇ ಅಧಿಸೂಚೆಯನ್ನು ರಾಜ್ಯ ಸರ್ಕಾರ ಸಾರಾಸಗಟ ತಳ್ಳಿ ಹಾಕಿದೆ ಎಂದು ಗಂಟಿಹೊಳೆ ಹೇಳಿದ್ದಾರೆ.
ಡಾ.ಕೆ ಕಸ್ತೂರಿರಂಗನ್ ನೇತೃತ್ವದ ಸಮಿತಿ ವರದಿಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲ್ಪಟ್ಟಿರುವ ಪ್ರದೇಶಗಳು ಈಗಾಗಲೇ ರಕ್ಷಿತ ಪ್ರದೇಶಗಳು, ಅಧಿಸೂಚಿತ ಅರಣ್ಯಗಳು ಅಥವಾ ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲ್ಪಟ್ಟು ಸರ್ಕಾರದ ರಕ್ಷಣೆ ಅಡಿಯಲ್ಲಿವೆ. ಈ ಪ್ರದೇಶಗಳ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸುವುದು ಸಂರಕ್ಷಣೆಯ ಉದ್ದೇಶಗಳಿಗೆ ಪ್ರತಿಕೂಲವಾಗುವುದಾಗಿ ಹಾಗೂ ಜನರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂದು ರಾಜ್ಯ ಸಚಿವ ಸಂಪುಟ ಸಭೆಗಳಲ್ಲಿ ಸದರಿ ವರದಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹೊರಡಿಸಿರುವ ಹಿಂದಿನ ಕರಡು ಅಧಿಸೂಚನೆಗಳನ್ನು ಸಂಪೂರ್ಣವಾಗಿ ನಿರಾಕರಿಸಲು ನಿರ್ಣಯಿಸಲಾಗಿರುತ್ತದೆ. ರಾಜ್ಯ ಸಚಿವ ಸಂಪುಟ ಸಭೆಗಳ ನಿರ್ಣಯಗಳನ್ನು ಅನುಸರಿಸಿ ಡಾ. ಕಸ್ತೂರಿರಂಗನ್ ಸಮಿತಿಯ ವರದಿಯ ಶಿಫಾರಸುಗಳನ್ನು ನಿರಾಕರಿಸಿ ವರದಿ ಅನುಷ್ಠಾನದ ಸಂಬಂಧ ಹೊರಡಿಸಿದ ಕರಡು ಅಧಿ ಸೂಚನೆಗಳನ್ನು ತಿರಸ್ಕರಿಸುವ ರಾಜ್ಯ ಸರ್ಕಾರದ ಸ್ಪಷ್ಟ ನಿಲುವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂಬುವುದನ್ನು ಸಚಿವರು ಸ್ಪಷ್ಟಪಡಿಸಿದ್ದಾರೆಂದು ಹೇಳಿದ್ದಾರೆ.
ಈ ಹಿಂದಿನ 6 ಅಧಿಸೂಚನೆ ಸೇರಿದಂತೆ ಪ್ರಸ್ತುತ 7ನೇ ಅಧಿಸೂಚನೆಯೂ ಕೂಡ ವೈಮಾನಿಕ ಸಮೀಕ್ಷೆಯ ಆಧಾರದ ಮೂಲಕ ಕೈಗೊಳ್ಳಲಾಗಿದ್ದು, ಅಧಿಸೂಚನೆಯಲ್ಲಿ ಗ್ರಾಮಗಳಲ್ಲಿ ಬರಬಹುದಾದ ಪ್ರದೇಶಗಳ ಅಕ್ಷಾಂಶ ಹಾಗೂ ರೇಖಾಂಶಗಳ ವಿವರಗಳನ್ನು ನಮೂದಿಸಿದ್ದರೂ ಪ್ರಸ್ತುತ ಸದರಿ ಗಡಿ ರೇಖೆ ಯಾವ ಭಾಗದಲ್ಲಿ ಹಾದು ಹೋಗುತ್ತದೆ ಎಂಬ ಬಗ್ಗೆ ಸ್ಥಳೀಯ ಗ್ರಾಮಸ್ಥರಿಗೆ ಮಾಹಿತಿಗಳು ಇಲ್ಲದೆ ಇರುವ ಕಾರಣ ಹಾಗೂ ಈ ಬಗ್ಗೆ ನಿರಂತರವಾಗಿ ಆತಂಕವನ್ನು ತೋರ್ಪಡಿಸುತ್ತಿರುವುದರಿಂದ ಕರಡು ಅಧಿಸೂಚನೆಯಲ್ಲಿ ಇರುವ ಗ್ರಾಮಗಳ ಭೌತಿಕ ಸಮೀಕ್ಷೆಯನ್ನು ಒಂದು ಬಾರಿಗೆ ರಾಜ್ಯ ಸರ್ಕಾರದ ಮೂಲಕ ಕೈಗೊಂಡು ಗ್ರಾಮೀಣ ಜನರಿಗೆ ಸ್ಪಷ್ಟ ಮಾಹಿತಿಯೊಂದಿಗೆ ಅವರಲ್ಲಿರುವ ಆತಂಕ ನಿವಾರಣೆ ಮಾಡಿ ತದನಂತರ ಕ್ಷೇತ್ರಿಯ ಜನ ಜೀವನೋಪಾಯದ ಪೂರಕ ಸಂಪೂರ್ಣ ಮಾಹಿತಿಯೊಂದಿಗೆ ಕೇಂದ್ರ ಸರಕಾರದೊಂದಿಗೆ ಈ ವಿಚಾರದಲ್ಲಿ ಸಮನ್ವಯ ಸಾಧಿಸಲು ಹಾಗೂ ಹಕ್ಕು ಮಂಡಿಸಲು ಪೂರಕ ವಾತಾವರಣ ಸೃಷ್ಟಿಸಲು ಆಗುವುದರಿಂದ ಅಧಿಸೂಚಿತ ಗ್ರಾಮಗಳಲ್ಲಿ ಸರಕಾರದ ಮೂಲಕ ಒಂದು ಬಾರಿಗೆ ಭೌತಿಕ ಸರ್ವೇ ನಡೆಸಲು ಕ್ರಮ ವಹಿಸಬೇಕೆಂದು ಇದೇ ಸಂದರ್ಭದಲ್ಲಿ ಶಾಸಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.


















