ಬೆಂಗಳೂರು : ನಗರದ ಕೆ.ಆರ್.ಪುರ ಸಮೀಪದ ಆವಲಹಳ್ಳಿಯ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ 16 ವರ್ಷದ ಬಾಲಕನೊಬ್ಬ ನೀರುಪಾಲಾಗಿರುವ ದುರ್ಘಟನೆ ನಡೆದಿದೆ. ಗೆಳೆಯರೊಂದಿಗೆ ಕೆರೆಯ ಬಳಿ ಆಟವಾಡಲು ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ನೀರುಪಾಲಾಗಿರುವ ಬಾಲಕನನ್ನು ಹೃತಿಕ್ ಎಂದು ಗುರುತಿಸಲಾಗಿದೆ. ಉತ್ತರ ಪ್ರದೇಶ ಮೂಲದ ಕುಟುಂಬವು ಕಳೆದ 16 ವರ್ಷಗಳಿಂದ ಆವಲಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಒಂದು ಹೆಣ್ಣು ಮತ್ತು ಗಂಡು ಮಕ್ಕಳಿರುವ ಕುಟುಂಬದ ಪುತ್ರನಾಗಿದ್ದ ಹೃತಿಕ್ ಕಳೆದ ಮೇ 30ರಂದು ಮಧ್ಯಾಹ್ನ ಸ್ನೇಹಿತರೊಂದಿಗೆ ಕೆರೆಯ ಬಳಿ ತೆರಳಿದ್ದನು.
ಮೊದಲಿಗೆ ಬಾಲಕ ಕಾಣೆಯಾಗಿರುವ ಬಗ್ಗೆ ಅನುಮಾನಗೊಂಡ ಕುಟುಂಬಸ್ಥರು ಆವಲಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಬಾಲಕನ ಸ್ನೇಹಿತರನ್ನು ವಿಚಾರಿಸಿದಾಗ, ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಔಟ್‌ಲೆಟ್ ಬಳಿ ಆಟವಾಡುವ ವೇಳೆ ಹೃತಿಕ್ ನೀರಿನಲ್ಲಿ ಕೊಚ್ಚಿ ಹೋಗಿರುವ ಮಾಹಿತಿ ಬೆಳಕಿಗೆ ಬಂದಿದೆ.
ಮಾಹಿತಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದರು. ಆದರೆ ಬಾಲಕ ಜಾರಿ ಬಿದ್ದ ಪ್ರದೇಶದಲ್ಲಿ ನೊರೆ ತುಂಬಿಕೊಂಡಿದ್ದು, ರಭಸವಾಗಿ ಕೊಳಚೆ ನೀರು ಹರಿಯುತ್ತಿರುವ ಕಾರಣ ಕಾರ್ಯಾಚರಣೆಗೆ ಭಾರೀ ಅಡ್ಡಿಯಾಗಿದೆ. ಸುಮಾರು 300 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಕೆರೆಯಾದರೂ, ಸಂಪೂರ್ಣ ಕೆರೆ ಜಾಂಡು ಬೆಳೆದು ಕಲುಷಿತಗೊಂಡಿರುವುದು ರಕ್ಷಣಾ ಕಾರ್ಯಕ್ಕೆ ಸವಾಲಾಗಿದೆ.
ಬಾಲಕನ ಪತ್ತೆ ಕಾರ್ಯಕ್ಕೆ ಜೆಸಿಬಿ ಅಥವಾ ಹಿಟಾಚಿ ಯಂತ್ರಗಳನ್ನು ಒದಗಿಸುವಂತೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಮಾಡಲಾಗಿದ್ದರೂ, ಅಗತ್ಯ ಯಂತ್ರೋಪಕರಣ ಒದಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಇದರಿಂದ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯ ಅಭಿವೃದ್ಧಿಯ ಕೊರತೆ, ಕಲುಷಿತ ನೀರು, ಜಾಂಡು ಬೆಳವಣಿಗೆ ಹಾಗೂ ಅನೈತಿಕ ಚಟುವಟಿಕೆಗಳ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬಾಲಕನ ದುರಂತದ ಬಳಿಕ ಕೆರೆಯ ಸುರಕ್ಷತೆ ಹಾಗೂ ಅಭಿವೃದ್ಧಿ ಕುರಿತು ಮತ್ತೆ ಪ್ರಶ್ನೆಗಳು ಉದ್ಭವಿಸಿವೆ.
ಇದನ್ನೂ ಓದಿ : ಟೆಂಪೋ-ಸ್ಕೂಟರ್ ಮಧ್ಯೆ ಭೀಕರ ಅಪಘಾತ ; ಸವಾರ ಬಲಿ


















