ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ಬೆನ್ನಲ್ಲೇ ಪೋಕ್ಸೋ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕಾನೂನು ಪ್ರಕ್ರಿಯೆ ತೀವ್ರಗೊಂಡಿದೆ.
ಯಡಿಯೂರಪ್ಪ ಅವರನ್ನು ಬಂಧಿಸದಂತೆ ನೀಡಿದ್ದ ಆದೇಶ ತೆರವು ಕೋರಿ ಸಿಐಡಿ ಎಸ್ ಪಿಪಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿರುವ ಕೋರ್ಟ್ ವಿಚಾರಣೆಯನ್ನು ಆಗಸ್ಟ್ 30ಕ್ಕೆ ಮುಂದೂಡಿದೆ. ಸದ್ಯಕ್ಕೆ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದರೂ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಕುತೂಹಲ ಮನೆ ಮಾಡಿದೆ.
ಮಧ್ಯಂತರ ರಕ್ಷಣೆ ತೆರವು ಮಾಡಲು ಹೈಕೋರ್ಟ್ ಗೆ ಸಿಐಡಿ ಮೆಮೋ ಸಲ್ಲಿಕೆ ಮಾಡಿತ್ತು. ಆ. 22ರಂದು ಸಿಐಡಿ ಪರ ಎಸ್‌ಪಿಪಿ ಅಶೋಕ್ ನಾಯ್ಕ್ ಅವರು ಮೆಮೋ ಸಲ್ಲಿಕೆ ಮಾಡಿದ್ದು, ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಮಧ್ಯಾಹ್ನ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಹೇಳಿತ್ತು. ಅದರಂತೆ ವಿಚಾರಣೆ ನಡೆದು, ಮತ್ತೆ ಆ. 30ಕ್ಕೆ ಮುಂದೂಡಲಾಗಿದೆ.
ಯಡಿಯೂರಪ್ಪ ಪರ ವಕೀಲರು ವಾದಮಂಡನೆಗೆ ಕಾಲಾವಕಾಶ ಕೋರಿದ್ದಾರೆ. ಹೀಗಾಗಿ ಹೈಕೋರ್ಟ್, ಅರ್ಜಿ ವಿಚಾರಣೆಯನ್ನು ಮುಂದೂಡಿತು.