ಬೆಂಗಳೂರು: ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಸಮರ ಸಾರಿದೆ. ನಾಳೆಯಿಂದ ಈ ಅಸಲಿ ಯುದ್ಧ ಆರಂಭವಾಗಲಿದೆ.
ಪ್ರಾಸಿಕ್ಯೂಷನ್ ಆದೇಶದ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಹೈಕೋರ್ಟ್ ಮೆಟ್ಟಿಲು ಏರಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಕಾನೂನು ಸಮರದ ಕುರಿತು ಸಿಎಂ ಸಿದ್ದರಾಮಯ್ಯ ಅವರು ವಕೀಲರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನಾಳೆಯೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಿದ್ದಾರೆ. ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಪ್ರಮುಖವಾಗಿ ಸಿಎಂ ಪರ ವಕೀಲರ ವಾದಕ್ಕೆ ಕೇಂದ್ರ ಸರ್ಕಾರದ ಚೆಕ್ ಲಿಸ್ಟ್ ಅಸ್ತ್ರ ಬಳಕೆಗೆ ಸಿಎಂ ಸಿದ್ದು ತಂಡ ಸಿದ್ಧವಾಗಿದೆ ನಿಂತಿದೆ. ಪ್ರಾಸಿಕ್ಯೂಷನ್ ಗೆ ನೀಡುವ ನಿಯಮ ಇದಲ್ಲ ಎಂಬ ಕೇಂದ್ರ ಸರ್ಕಾರದ ನಿಯಮವನ್ನೇ ಮುಂದಿಡಲು ಮುಂದಾಗಿದ್ದಾರೆ.
14 ಸೈಟ್ ವಿಚಾರ ಸಿಎಂಗೆ ಸಂಕಷ್ಟ ತಂದೊಡ್ಡಿದೆ. ರಾಜ್ಯಪಾಲರು ಸಿಎಂ ವಿರುದ್ಧ ತನಿಖೆಗೆ ಆದೇಶ ನೀಡಿದ್ದು, ಕಾಂಗ್ರೆಸ್ ಪಾಳಯದಲ್ಲಿ ತಳಮಳ ಸೃಷ್ಟಿಯಾಗಿದೆ. ನಾಳೆಯಿಂದ ಅಸಲಿ ಕಾನೂನು ಯುದ್ಧಕ್ಕೆ ನಾಂದಿ ಸಿಗಲಿದ್ದು, ಸಿದ್ದರಾಮಯ್ಯಗೆ ಹೈಕಮಾಂಡ್ ಬಲ ಸಿಕ್ಕಿದೆ.
ಹೀಗಾಗಿ ದೆಹಲಿಯಿಂದ ಬರುತ್ತಿರುವ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಜೊತೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲು ಕೇಂದ್ರ ಸರ್ಕಾರವೇ 2021ರ ಸೆಪ್ಟೆಂಬರ್ನಲ್ಲಿ ಚೆಕ್ ಲಿಸ್ಟ್ ಮಾಡಿದೆ. ಡಿಜಿ-ಐಜಿಪಿ ಮಟ್ಟದ ಅಧಿಕಾರಿಗಳು ಪ್ರಾಸಿಕ್ಯೂಷನ್ ಗೆ ಮನವಿ ಮಾಡಬೇಕು. ಪ್ರಾಸಿಕ್ಯೂಷನ್ ಗೆ ನೀಡುವಾಗ ಯಾವುದಾದರೂ ತನಿಖಾ ವರದಿ ಇರಬೇಕು ಎಂಬುವುದನ್ನು ಕೇಂದ್ರ ಸರ್ಕಾರ ಚೆಕ್ ಲಿಸ್ಟ್ ಮಾಡಿ ಹೇಳಿದೆ. ಆದರೆ, ಸಿದ್ದರಾಮಯ್ಯನವರ ವಿರುದ್ಧ ಯಾವುದೇ ತನಿಖಾ ವರದಿ ಇಲ್ಲದೇ, ಆಧಾರವಿಲ್ಲದೇ ಪ್ರಾಸಿಕ್ಯೂಷನ್ ಗೆ ನೀಡಲಾಗಿದೆ. ಖಾಸಗಿ ವ್ಯಕ್ತಿಗಳ ದೂರಿಗೆ ರಾಜ್ಯಪಾಲರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ರಾಜ್ಯಪಾಲರೇ ತನಿಖಾಧಿಕಾರಿಯಂತೆ ಕಾರ್ಯ ಮಾಡಿದ್ದಾರೆ. ಕೇಂದ್ರ ನೀಡಿರುವ ಚೆಕ್ ಲಿಸ್ಟ್ ಪಾಲನೆಯಾಗಿಲ್ಲ. ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಕಾನೂನು ಬಾಹಿರ. ಅಲ್ಲದೇ, ಸುಪ್ರೀಂ ಕೋರ್ಟ್ ನ ಬೇರೆ ಬೇರೆ ಪ್ರಕರಣಗಳನ್ನು ಪ್ರಸ್ತಾಪಿಸಿ ಪ್ರಾಸಿಕ್ಯೂಷನ್ ಗೆ ನೀಡುವ ನಿಯಮ ಇದಲ್ಲ ಎಂದು ವಾದಿಸಲು ವಕೀಲರ ತಂಡ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗಿದೆ. ಆದರೆ, ಈ ರಾಜಕೀಯ ಯುದ್ಧದಲ್ಲಿ ಗೆಲ್ಲೋರು ಯಾರು ಎಂಬುವುದನ್ನು ಕಾಯ್ದು ನೋಡಬೇಕಿದೆ?