ಶ್ರೀಲಂಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ವಿಶೇಷ ದಾಖಲೆ ಮಾಡಿದ್ದಾರೆ.
ಆಸ್ಟ್ರೇಲಿಯಾ ಆಟಗಾರ ಡೇವಿಡ್ ವಾರ್ನರ್ ಅವರ ಸರ್ವಶ್ರೇಷ್ಠ ದಾಖಲೆ ಮುರಿಯುವ ಮೂಲಕ ಹೊಸ ದಾಖಲೆಗೆ ತಮ್ಮ ಹೆಸರು ನೀಡಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದ ರೋಹಿತ್ ಶರ್ಮಾ 47 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 7 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದರು. ಈ 58 ರನ್ ಗಳೊಂದಿಗೆ ಹಿಟ್ ಮ್ಯಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆರಂಭಿಕನಾಗಿ 15 ಸಾವಿರ ರನ್ ಗಳಿಸಿದ 10ನೇ ಬ್ಯಾಟ್ಸ್ ಮನ್ ಎಂಬ ದಾಖಲೆ ಬರೆದಿದ್ದಾರೆ.
ಅದರಲ್ಲಿಯೂ ಆರಂಭಿಕನಾಗಿ ಅತೀ ವೇಗವಾಗಿ 15 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಬ್ಯಾಟರ್ ಎಂಬ ಹೆಗ್ಗಳಿಕೆ ಕೂಡ ಈಗ ರೋಹಿತ್ ಹೆಸರಿಗೆ ಬಂದಿದೆ. ಇದಕ್ಕೂ ಮುನ್ನ ಈ ದಾಖಲೆ ಆಸೀಸ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೆಸರಿನಲ್ಲಿತ್ತು.
ಆಸ್ಟ್ರೇಲಿಯಾ ಪರ ಏಕದಿನ, ಟಿ20 ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 15 ಸಾವಿರಗಳನ್ನು 361 ಇನಿಂಗ್ಸ್ ಗಳಲ್ಲಿ ಗಳಿಸಿದ್ದರು. ಈ ಮೂಲಕ ಅತಿ ವೇಗವಾಗಿ 15 ಸಾವಿರ ರನ್ ಗಳಿಸಿದ 2ನೇ ಓಪನರ್ ಎನಿಸಿದ್ದರು.
ಆದರೆ, ಈಗ ರೋಹಿತ್ ಶರ್ಮಾ ಈ ದಾಖಲೆ ಮುರಿದು 2ನೇ ಸ್ಥಾನಕ್ಕೆ ಏರಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್, ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ಇನಿಂಗ್ಸ್ ಆರಂಭಿಸಿರುವ ರೋಹಿತ್ ಶರ್ಮಾ ಕೇವಲ 352 ಇನಿಂಗ್ಸ್ ಗಳಲ್ಲಿ 15 ಸಾವಿರ ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಾರ್ನರ್ ದಾಖಲೆ ಮುರಿದು ಅತೀ ವೇಗವಾಗಿ 15 ಸಾವಿರ ರನ್ ಕಲೆ ಹಾಕಿದ ವಿಶ್ವದ 2ನೇ ಆರಂಭಿಕ ಬ್ಯಾಟ್ಸಮನ್ ಎನಿಸಿಕೊಂಡಿದ್ದಾರೆ.
ಆದರೆ, ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಭಾರತ ತಂಡದ ಪರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾಗಿ ಬ್ಯಾಟ್ ಬೀಸಿರುವ ಸಚಿನ್ ಕೇವಲ 331 ಇನಿಂಗ್ಸ್ ಗಳಲ್ಲಿ 15 ಸಾವಿರ ರನ್ ಗಳಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ವೇಗವಾಗಿ 15 ಸಾವಿರ ರನ್ ಗಳಿಸಿದ ದಾಖಲೆ ಮಾಸ್ಟರ್ ಬ್ಲಾಸ್ಟರ್ ಹೆಸರಿನಲ್ಲಿದೆ.