ಇಂಗ್ಲೆಂಡ್ ತಂಡ ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆ ಈಗ ಕ್ರಿಕೆಟ್ ಅಂಗಳದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಬಗ್ಗೆ ಸದ್ದಾಗುತ್ತಿದೆ. ಈಗಾಗಲೇ ಈ ಅಂಕಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು, ಇನ್ನೂ ಎಷ್ಟು ಪಂದ್ಯ ಗೆದ್ದರೆ, ಹಾದಿ ಸುಗಮ ಎಂಬ ಚರ್ಚೆ ಶುರುವಾಗಿದೆ.
ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 2-0 ಅಂತರದಿಂದ ವಶಪಡಿಸಿಕೊಂಡಿದೆ. ಆಂಗ್ಲರ ಈ ಗೆಲುವು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಾಯಿಂಟ್ಸ್ ಟೇಬಲ್ ನಲ್ಲಿ ಮಹತ್ವದ ಬದಲಾವಣೆ ಆಗುವಂತೆ ಮಾಡಿದೆ. ಆದರೆ, ಭಾರತ ತಂಡದ ಸ್ಥಾನಕ್ಕೆ ಮಾತ್ರ ಯಾವ ತೊಂದರೆಯೂ ಆಗಿಲ್ಲ.
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಸರಣಿಯಲ್ಲಿ ಇಲ್ಲಿಯವರೆಗೆ 9 ಪಂದ್ಯಗಳನ್ನಾಡಿರುವ ಭಾರತ ತಂಡವು 6 ಗೆಲುವು, 2 ಸೋಲು ಹಾಗೂ 1 ಡ್ರಾನೊಂದಿಗೆ 74 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ 68.52 ಗೆಲುವಿನ ಶೇಕಡಾವಾರಿನೊಂದಿಗೆ ಅಗ್ರಸ್ಥಾನದಲ್ಲಿದೆ. ಆದರೂ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಫೈನಲ್ ಆಡುವುದು ಇನ್ನೂ ಖಿಚತವಾಗಿಲ್ಲ.
ಭಾರತದೊಂದಿಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕಿಸ್ತಾನ್ ತಂಡಗಳು ಕೂಡ ಫೈನಲ್ ರೇಸ್ ನಲ್ಲಿವೆ. ಹೀಗಾಗಿ ಮುಂಬರುವ ಸರಣಿಗಳು ಭಾರತ ತಂಡದ ಪಾಲಿಗೆ ತುಂಬಾ ಮಹತ್ವ ಪಡೆದಿವೆ. ಭಾರತ ತಂಡವು ನೇರವಾಗಿ ಫೈನಲ್ ತಲುಪಲು ಮುಂದಿನ ಮೂರು ಸರಣಿಗಳಲ್ಲಿ 2 ಸರಣಿಗಳಲ್ಲಿ ಭರ್ಜರಿ ಗೆಲುವು ಸಾಧಿಸಿದರೆ, ಸಾಕು. ಭಾರತ ತಂಡಕ್ಕೆ ಬಾಂಗ್ಲಾದೇಶ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಳಿಯಾಗುತ್ತಿವೆ. ಹೀಗಾಗಿ ಈ ಮೂರು ದೇಶಗಳೊಂದಿಗೆ ಭಾರತ ಸೆಣಸಬೇಕಿದೆ. ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ.
ಬಾಂಗ್ಲಾದೇಶ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ 5 ಪಂದ್ಯಗಳನ್ನಾಡಲಿವೆ. ದೊಡ್ಡ ಸವಾಲೆಂದರೆ ಆಸ್ಟ್ರೇಲಿಯಾ. ಹೀಗಾಗಿ ಈ ಸರಣಿಗೂ ಮುನ್ನ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ್ ವಿರುದ್ಧದ ಎಲ್ಲಾ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಭಾರತ ಫೈನಲ್ ಪ್ರವೇಶ ಪಡೆಯಬಹುದು. ಮುಂದಿನ 10 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಆರೇಳು ಪಂದ್ಯಗಳನ್ನು ಗೆದ್ದರೂ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಗೆ ಪ್ರವೇಶ ಪಡೆಯಬಹುದು.