ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ತುಂಬಾ ಭರವಸೆಯ ರಾಜ್ಯ ಎಂದರೆ ಉತ್ತರ ಪ್ರದೇಶವಾಗಿತ್ತು. ಆದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ನಂಬಲಾರದಷ್ಟು ನೋವು ಕೊಡಲು ಕಾಂಗ್ರೆಸ್ ಹಾಗೂ ಇಂಡಿಯಾ ಮೈತ್ರಿಕೂಟ ಯಶಸ್ಸು ಕಂಡಿದ್ದವು. ಆಗ ಬಿಜೆಪಿಯನ್ನು ಮಕಾಡೆ ಮಲಗಿಸಿ, ತನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿತ್ತು. ಅದೂ ಬಿಜೆಪಿಯ ಜಂಗಾಬಲವನ್ನೇ ಅಡಗಿಸುವುದರ ಮೂಲಕ ಎನ್ನುವುದು ಇನ್ನೂ ವಿಶೇಷ. ಇದೇ ಅಲೆಯಲ್ಲಿ ತೇಲುತ್ತಿರುವ ಕಾಂಗ್ರೆಸ್ ಬಿಜೆಪಿ ವಿರುದ್ಧ ಮತ್ತೊಂದು ಶಪಥ ಮಾಡಿದೆ.
ರಾಮಜನ್ಮ ಭೂಮಿಯಲ್ಲಿ ಬಿಜೆಪಿಗೆ ಮಾಡಿರುವು ಮುಖಭಂಗದಂತೆ ಗುಜರಾತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇತರೆ ಬಿಜೆಪಿ ನಾಯಕರನ್ನು ಕೂಡ ಸೋಲಿಸಿ, ಅವಮಾನ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಹಮದಾಬಾದ್‌ನಲ್ಲಿ ಶನಿವಾರ ಹೇಳಿದರು. ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಂಸತ್ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಾವು ಜತೆಗೂಡಿ ಉತ್ತರ ಪ್ರದೇಶದಲ್ಲಿ ಮೋದಿ ಅವರನ್ನು ಸೋಲಿಸಿದ್ದೇವೆ. ಅಯೋಧ್ಯಾದಲ್ಲಿ ಅವರನ್ನು ಸೋಲಿಸಿರುವಂತೆಯೇ ಗುಜರಾತ್‌ನಲ್ಲಿ ಕೂಡ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಮಣಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯಾದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಾಗ ಜನರು ತಮ್ಮ ಭೂಮಿ ಕಳೆದುಕೊಂಡರು. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಅವರಿಗೆ ಯಾರಿಗೂ ಆಹ್ವಾನ ಸಿಗಲಿಲ್ಲ. ಅಲ್ಲಿನ ಸ್ಥಳೀಯರ ನೋವಿಗೆ ಕಾರಣವಾಗಿತ್ತು. ಹೀಗಾಗಿಯೇ ಅಲ್ಲಿನ ಜನ ಮೋದಿ ವಿರುದ್ಧ ತಿರುಗಿ ಬಿದ್ದರು. ಹೀಗಾಗಿಯೇ ರಾಮನ ಭೂಮಿಯಲ್ಲಿಯೇ ಬಿಜೆಪಿ ಸೋಲು ಕಾಣುವಂತಾಯಿತು ಎಂದು ಇತ್ತೀಚೆಗಷ್ಟೇ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂಸತ್ ನಲ್ಲಿ ಹೇಳಿದ್ದರು.
ಏರ್‌ಪೋರ್ಟ್ ನಿರ್ಮಾಣವಾದಾಗ ಅಯೋಧ್ಯಾ ರೈತರು ತಮ್ಮ ಜಮೀನು ಕಳೆದುಕೊಂಡರು. ರಾಮ ಮಂದಿರದ ಉದ್ಘಾಟನಾ ಸಮಾರಂಭಕ್ಕೆ ತಮ್ಮನ್ನು ಯಾರೊಬ್ಬರೂ ಆಹ್ವಾನಿಸದೆ ಇದ್ದಾಗ ಅಯೋಧ್ಯಾ ಜನರು ಬೇಸರಗೊಂಡರು. ಅಯೋಧ್ಯಾವನ್ನು ಕೇಂದ್ರವಾಗಿಸಿ ಅಡ್ವಾಣಿ ಆರಂಭಿಸಿದ ಚಳವಳಿಯನ್ನು ಐಎನ್‌ಡಿಐಎ ಮೈತ್ರಿಕೂಟವು ಅಯೋಧ್ಯಾದಲ್ಲಿಯೇ ಮಣಿಸಿದೆ ಎಂದು ರಾಹುಲ್ ಗಾಂಧಿ ಅವರು ಎಲ್‌ಕೆ ಅಡ್ವಾಣಿ ಅವರ ರಾಮ ಜನ್ಮಭೂಮಿ ರಥಯಾತ್ರೆ ಚಳವಳಿಯನ್ನು ಉಲ್ಲೇಖಿಸಿ, ಬಿಜೆಪಿಯನ್ನು ವಾಚಾಮಗೋಚರವಾಗಿ ಲೇವಡಿ ಮಾಡಿದರು.
ಮೋದಿ ಅವರು ಅಯೋಧ್ಯೆಯಲ್ಲಿ ರಾಮನ ಮಂದಿರ ನಿರ್ಮಾಣವಾಗುತ್ತಿದ್ದಂತೆ ಜನರು ಪ್ರೀತಿಯಿಂದ ಮತ ಹಾಕುತ್ತಾರೆಂದು ಭಾವಿಸಿದ್ದರು. ಹೀಗಾಗಿಯೇ ಅಲ್ಲಿ ಸ್ಪರ್ಧಿಸಲು ಮುಂದಾಗಿದ್ದರು. ಆದರೆ ಅವರ ಸಮೀಕ್ಷೆದಾರರು ಅಯೋಧ್ಯಾದಲ್ಲಿ ಸೋಲು ಉಂಟಾಗಲಿದೆ. ಇದರಿಂದ ನಿಮ್ಮ ರಾಜಕೀಯ ಜೀವನವೇ ಅಂತ್ಯಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರಿಂದ ಹಿಂದೆ ಸರಿದರು ಎಂದು ರಾಹುಲ್ ಆರೋಪಿಸಿದ್ದರು.
ಅಯೋಧ್ಯಾ ಪ್ರದೇಶವನ್ನು ಒಳಗೊಂಡಿರುವ ಫೈಜಾಬಾದ್ ಲೋಕಸಭೆ ಕ್ಷೇತ್ರದಲ್ಲಿನ ಬಿಜೆಪಿ ಸೋಲಿನ ಕಾರಣಗಳನ್ನು ವಿವರಿಸಿದ ರಾಹುಲ್, ರಾಮ ಮಂದಿರ ನಿರ್ಮಿಸಲು ಅಯೋಧ್ಯೆಯಲ್ಲಿ ಜನರಿಂದ ಭಾರಿ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದರೆ, ಇಲ್ಲಿಯವರೆಗೆ ನರೇಂದ್ರ ಮೋದಿ ಸರ್ಕಾರವು ಅವರಿಗೆ ಯಾವುದೇ ಪರಿಹಾರ ನೀಡಿಲ್ಲ. ರೈತರ ಜಮೀನಿನ ಮೇಲೆ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಆ ಭೂಮಿ ಕಳೆದುಕೊಂಡ ರೈತರಿಗೂ ಬಿಜೆಪಿಯಿಂದ ಸಮರ್ಪಕ ಹಾಗೂ ಸರಿಯಾದ ಪರಿಹಾರ ನೀಡಲು ಆಗಿಲ್ಲ. ಇನ್ನೂ ಮೇಲಾಗಿ ರಾಮ ಮಂದಿರ ಉದ್ಘಾಟನೆ ಸಮಾರಂಭದಲ್ಲಿ ಅಯೋಧ್ಯಾದ ಒಬ್ಬನೇ ಒಬ್ಬ ವ್ಯಕ್ತಿ ಭಾಗವಹಿಸಿರಲಿಲ್ಲ. ಹೀಗಾದರೆ ಜನರು ಯಾರಾದರೂ ನಾಯಕನನ್ನು ಮೆಚ್ಚುತ್ತಾರೆಯೇ ಎಂದು ಪ್ರಶ್ನಿಸಿದ ರಾಹುಲ್, ಈ ಸಂಗತಿಯೇ ಮತದಾರರ ಕೆರಳಿಕೆಗೆ ಕಾರಣವಾಗಿತ್ತು. ಹೀಗಾಗಿ ಎನ್‌ಡಿಎ ಸೋತು, ಐಎನ್‌ಡಿಐಎ ಗೆಲ್ಲಲು ಇವುಗಳೇ ಕಾರಣ. ಎಲ್‌ಕೆ ಅಡ್ವಾಣಿ ಅವರು ಅಯೋಧ್ಯಾ ಸುತ್ತಮುತ್ತ ಆರಂಭಿಸಿದ ಚಳವಳಿಯನ್ನು ಬಿಜೆಪಿ ಸೋಲಿಸಿದೆ” ಎಂದು ವಾಗ್ದಾಳಿ ನಡೆಸಿದ್ದರು.
ಅಯೋಧ್ಯಾದ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅದಾನಿ ಮತ್ತು ಅಂಬಾನಿ ಅವರನ್ನು ಕಾಣಬಹುದಾಗಿತ್ತು. ಆದರೆ ಯಾವ ಬಡ ವ್ಯಕ್ತಿಯೂ ಅಲ್ಲಿ ಕಾಣಿಸಿರಲಿಲ್ಲ. ಗುಜರಾತ್‌ನಲ್ಲಿ ಬಿಜೆಪಿ ಬೆಂಬಲಿಗರು ಕಾಂಗ್ರೆಸ್ ಕಚೇರಿಯನ್ನು ಧ್ವಂಸಗೊಳಿಸಿದ್ದಲ್ಲದೆ, ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. 2017ರಲ್ಲಿ ನಾವು ಮೂರು ತಿಂಗಳು ಕಠಿಣ ಶ್ರಮಪಟ್ಟಿದ್ದೆವು. ಫಲಿತಾಂಶ ಉತ್ತಮವಾಗಿತ್ತು. ಈಗ ನಮಗೆ ಮೂರು ವರ್ಷಗಳಿವೆ. ನಾವು ಗುರಿಯ ಗೆರೆಯನ್ನು ದಾಟಲಿದ್ದೇವೆ. ಗುಜರಾತ್‌ನಲ್ಲಿ 30 ವರ್ಷಗಳ ಬಳಿಕ ಸರ್ಕಾರ ರಚಿಸಲಿದ್ದೇವೆ. ನಾನು ಮತ್ತು ನನ್ನ ಸಹೋದರಿ ಸೇರಿದಂತೆ ಪಕ್ಷದ ನಾಯಕತ್ವ ಬಿಜೆಪಿ ವಿರುದ್ಧ ನಿಲ್ಲಲಿದೆ. ನಮ್ಮ ಪರ ಮತ ಪಡೆದು, ನಿಮ್ಮನ್ನು ಸೋಲಿಸಲಿದ್ದೇವೆ ಎಂದು ವಾಗ್ದಾನ ಮಾಡಿದ್ದಾರೆ.