
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಆಟಗಾರ್ತಿ ಶಫಾಲಿ ವರ್ಮಾ ದಾಖಲೆ ಬರೆದಿದ್ದಾರೆ.
ಶಫಾಲಿ ವರ್ಮಾ ದ್ವಿ ಶತಕ ಹಾಗೂ ಸ್ಮೃತಿ ಮಂಧಾನ ಅವರ ಶತಕದ ನೆರವಿನಿಂದಾಗಿ ಭಾರತ ತಂಡ ಬೃಹತ್ ಮೊತ್ತ ದಾಖಲಿಸುವತ್ತ ದಾಪುಗಾಲು ಇಟ್ಟಿದೆ. ಈಗಾಗಲೇ ಭಾರತ ತಂಡ 400 ರನ್ಗಳ ಗಡಿ ದಾಟಿದೆ. ಈ ವೇಳೆ ಸ್ಮೃತಿ ಜೊತೆಗೆ ಮೊದಲ ವಿಕೆಟ್ಗೆ ದಾಖಲೆಯ ದ್ವಿಶತಕದ ಜೊತೆಯಾಟವನ್ನಾಡಿದ್ದ ಶಫಾಲಿ ವರ್ಮಾ ಸ್ಫೋಟಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.

ಕೇವಲ 196 ಎಸೆತಗಳಲ್ಲಿ ಶಫಾಲಿ ವರ್ಮಾ ದ್ವಿಶತಕ ಸಿಡಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಹೆಸರಿನಲ್ಲಿತ್ತು. 2024 ರಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ ದ್ವಿಶತಕ ಬಾರಿಸಿದ್ದರು. ಅದಕ್ಕೂ ಮುನ್ನ 2001ರಲ್ಲಿ ಇಂಗ್ಲೆಂಡ್ ವಿರುದ್ಧ 306 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದ ಆಸ್ಟ್ರೇಲಿಯಾದ ಕರೆನ್ ರೋಲ್ಟನ್ ಹೆಸರಿನಲ್ಲಿ ಈ ದಾಖಲೆ ಇತ್ತು. ಆದರೆ, ಈಗ ಶಫಾಲಿ ವರ್ಮಾ ಈ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಿದ್ದಾರೆ.

ಭಾರತ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಕೇವಲ 113 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು. ಮತ್ತೋರ್ವ ಆಟಗಾರ್ತಿ ಸ್ಮೃತಿ ಮಂಧಾನ ಕೂಡ ಶತಕ ಸಿಡಿಸಿ ಮಿಂಚಿದರು. ಆ ಬಳಿಕ ವೈಯಕ್ತಿಕ 149 ರನ್ ಕಲೆಹಾಕಿ ಸ್ಮೃತಿ ತಮ್ಮ ಇನ್ನಿಂಗ್ಸ್ ಮುಗಿಸಿದರು. ಸತೀಶ್ ಶುಭಾ ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ. ಅದಾಗ್ಯೂ ತನ್ನ ಆಟ ಮುಂದುವರೆಸಿದ ಶಫಾಲಿ, ಕೇವಲ 196 ಎಸೆತಗಳಲ್ಲಿ ದ್ವಿಶತಕ ಗಳಿಸಿದರು. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ 10 ನೇ ಮಹಿಳಾ ಕ್ರಿಕೆಟಿಗರು ಮತ್ತು ಭಾರತದ ಎರಡನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು. ಅಂತಿಮವಾಗಿ ಶಫಾಲಿ 197 ಎಸೆತಗಳಲ್ಲಿ 23 ಬೌಂಡರಿ ಹಾಗೂ 8 ಭರ್ಜರಿ ಸಿಕ್ಸರ್ಗಳ ಸಹಿತ 205 ರನ್ ಗಳಿಸಿ ರನೌಟ್ ಆದರು.

ಇದಕ್ಕೂ ಮುನ್ನ ಶೆಫಾಲಿ ವರ್ಮಾ, ಸ್ಮೃತಿ ಮಂಧಾನ ಜೊತೆಗೂಡಿ 292 ರನ್ ಗಳ ದಾಖಲೆಯ ಆರಂಭಿಕ ಜೊತೆಯಾಟದ ಕೊಡುಗೆ ನೀಡಿದ್ದರು. ಇದರೊಂದಿಗೆ ಇಬ್ಬರೂ ಪಾಕಿಸ್ತಾನದ 20 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಇದಕ್ಕೂ ಮುನ್ನ ಈ ದಾಖಲೆ ಪಾಕಿಸ್ತಾನದ ಸಾಜಿದಾ ಶಾ ಮತ್ತು ಕಿರಣ್ ಬಲೂಚ್ ಹೆಸರಿನಲ್ಲಿತ್ತು. 2004ರಲ್ಲಿ ಈ ಇಬ್ಬರೂ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ವಿಕೆಟ್‌ಗೆ 241 ರನ್ ಗಳಿಸಿದ್ದರು. ಅಲ್ಲದೇ, ಶೆಫಾಲಿ ಮತ್ತು ಮಂಧಾನ ಯಾವುದೇ ವಿಕೆಟ್‌ಗೆ ಅತ್ಯಧಿಕ ರನ್‌ಗಳ ಜೊತೆಯಾಟ ನೀಡಿದ ವಿಶ್ವದ ಎರಡನೇ ಜೋಡಿ ಎನಿಸಿಕೊಂಡಿದ್ದಾರೆ.
