ಚಿಕ್ಕಮಗಳೂರು: ತಮಿಳುನಾಡು ಮೂಲದ ವಲಸೆ ಕಾರ್ಮಿಕರ ಮೇಲೆ ಕಾಫಿ ತೋಟದ ಮಾಲೀಕನೊಬ್ಬ ಬಂದೂಕು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸುತ್ತಿರುವುದಾಗಿ ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬಸಗೋಡು ಗ್ರಾಮದ ಕಾಫಿ ತೋಟವೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ತೋಟದ ಮಾಲೀಕ ಭರತ್ ಎಂಬಾತ ಪುರುಷ ಮತ್ತು ಮಹಿಳಾ ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಘಟನೆಯ ವಿವರ ಮತ್ತು ಜೀತ ಪದ್ಧತಿಯ ಆರೋಪ
ವೈರಲ್ ಆಗಿರುವ ವಿಡಿಯೋ ದೃಶ್ಯಾವಳಿಗಳಲ್ಲಿ, ತೋಟದ ಮಾಲೀಕ ಭರತ್ ಕೈಯಲ್ಲಿ ಬಂದೂಕು ಮತ್ತು ದೊಣ್ಣೆ ಹಿಡಿದು ಕಾರ್ಮಿಕರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸುತ್ತಿರುವುದು ಕಂಡುಬಂದಿದೆ. ಕಾರ್ಮಿಕರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವುದರ ಜೊತೆಗೆ ಜೀವ ಬೆದರಿಕೆ ಹಾಕಲಾಗಿದೆ ಮತ್ತು ಜೀತ ಪದ್ಧತಿಯ ಮಾದರಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ.ವಲಸೆ ಕಾರ್ಮಿಕರು ತೋಟದ ಕೆಲಸ ಬಿಟ್ಟು ತಮ್ಮ ಊರಿಗೆ ಮರಳುವ ಇಚ್ಛೆ ವ್ಯಕ್ತಪಡಿಸಿದ ಬಳಿಕ ಈ ವಿವಾದ ಶುರುವಾಗಿದೆ ಎಂದು ವರದಿಯಾಗಿದೆ. ಈ ವೇಳೆ ಮಾಲೀಕ ಭರತ್, ಕಾರ್ಮಿಕರಿಗೆ ಮುಂಗಡವಾಗಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾನೆ. ಮುಂಗಡ ಹಣವನ್ನು ಮರುಪಾವತಿಸಲು ಕಾರ್ಮಿಕರು ಒಪ್ಪಿಕೊಂಡಿದ್ದರೂ ಸಹ, ಮಹಿಳಾ ಕಾರ್ಮಿಕರನ್ನೂ ಲೆಕ್ಕಿಸದೆ ಭರತ್ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.
ಸಂತ್ರಸ್ತ ಮಹಿಳೆಯ ಹೇಳಿಕೆ
ಹಲ್ಲೆಗೊಳಗಾಗಿ ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಮಹಿಳಾ ಕಾರ್ಮಿಕರಾದ ಮೀನಾ ಅವರು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.”ಸಂಬಳ ಪಾವತಿ ವಿಚಾರವಾಗಿ ಮಾತುಕತೆ ನಡೆದು ಅದು ವಾಗ್ವಾದಕ್ಕೆ ತಿರುಗಿತು. ಸಾಲದ ರೂಪದಲ್ಲಿ ನೀಡಿದ್ದ ಹಣವನ್ನು ವಾಪಸ್ ಕೊಟ್ಟು ಬೇರೆ ಕಡೆ ಕೆಲಸಕ್ಕೆ ಹೋಗುವ ಬಗ್ಗೆ ಚರ್ಚೆ ನಡೆದಿತ್ತು. ಇದೇ ವಿಚಾರಕ್ಕೆ ತೋಟದ ಮಾಲೀಕ ಭರತ್ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆಯ ಸಂದರ್ಭದಲ್ಲಿ ನಾನು ಧರಿಸಿದ್ದ ಚಿನ್ನದ ಓಲೆಯೂ ಕಾಣೆಯಾಗಿದೆ,” ಎಂದು ಮೀನಾ ತಿಳಿಸಿದ್ದಾರೆ.
ಸಾರ್ವಜನಿಕ ಆಕ್ರೋಶ, ಪೊಲೀಸ್ ತನಿಖೆ
ಈ ಘಟನೆಯ ವಿಡಿಯೋ ಹೊರಬೀಳುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲಾಡಳಿತವು ತಕ್ಷಣವೇ ಮಧ್ಯಪ್ರವೇಶಿಸಿ ವಲಸೆ ಕಾರ್ಮಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಮತ್ತು ಹಲ್ಲೆ ಹಾಗೂ ಕಿರುಕುಳ ನೀಡಿದ ತೋಟದ ಮಾಲೀಕನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.


















