ಪುಣೆ: 3 ವರ್ಷಗಳಿಂದ ಪ್ರೀತಿಸಿ, ಇನ್ನೇನು ಮದುವೆಯಾಗಬೇಕಿದ್ದ ಯುವತಿಯನ್ನೇ ಹೊಡೆದು ಕೊಂದ ಸಾಫ್ಟ್ವೇರ್ ಎಂಜಿನಿಯರ್ ಒಬ್ಬ, ರಾತ್ರಿಯಿಡೀ ಆಕೆಯ ಶವದ ಪಕ್ಕದಲ್ಲೇ ಕುಳಿತು ಬೆಳಗ್ಗೆ ಪೊಲೀಸರಿಗೆ ಶರಣಾಗಿರುವ ಆಘಾತಕಾರಿ ಘಟನೆ ಪುಣೆಯ ಹಿಂಜೇವಾಡಿಯಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು 27 ವರ್ಷದ ಕೋಮಲ್ ದಹಲೆ ಎಂದು ಗುರುತಿಸಲಾಗಿದ್ದು, ಆರೋಪಿ ಶುಭಂ ಜ್ಞಾನೇಶ್ವರ್ ಕಲ್ಬಂಡೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮದುವೆಗೆ ಎರಡೂ ಕುಟುಂಬಗಳ ಒಪ್ಪಿಗೆಯಿತ್ತು
ಮಹಾರಾಷ್ಟ್ರದ ವಾರ್ಧಾ ಮೂಲದ ಕೋಮಲ್ ದಹಲೆ ಪ್ರತಿಷ್ಠಿತ ‘ವಿಪ್ರೋ’ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬುಲ್ಧಾನಾ ಮೂಲದ ಆರೋಪಿ ಶುಭಂ ‘ಇನ್ಫೋಸಿಸ್’ ಸಂಸ್ಥೆಯಲ್ಲಿ ಟೆಕ್ಕಿಯಾಗಿದ್ದ. ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ಧತೆ ನಡೆಸಿತ್ತು. ಇವರಿಬ್ಬರ ಪ್ರೀತಿಯ ವಿಷಯ ಎರಡೂ ಮನೆಯವರಿಗೆ ತಿಳಿದಿದ್ದು, ಪೋಷಕರು ಕೂಡ ಇವರ ಮದುವೆಗೆ ಸಮ್ಮತಿ ಸೂಚಿಸಿದ್ದರು. ಆದರೆ ಇತ್ತೀಚೆಗೆ ಶುಭಂಗೆ ಬೇರೆ ಯುವತಿಯೊಂದಿಗೆ ಅನೈತಿಕ ಸಂಬಂಧವಿದೆ ಎಂದು ಕೋಮಲ್ ಅನುಮಾನ ಪಡುತ್ತಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ನಸುಕಿನ ಜಾವ ವಿಕೋಪಕ್ಕೆ ತಿರುಗಿದ ಜಗಳ
ಭಾನುವಾರ ಮತ್ತು ಸೋಮವಾರದ ಮಧ್ಯರಾತ್ರಿ ಸುಮಾರು 3 ಗಂಟೆಯ ಸಮಯದಲ್ಲಿ ಹಿಂಜೇವಾಡಿ ಪ್ರದೇಶದಲ್ಲಿರುವ ಕೋಮಲ್ ಅವರ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ಇದೇ ವಿಚಾರವಾಗಿ ಇಬ್ಬರ ನಡುವೆ ಮತ್ತೆ ತೀವ್ರ ವಾಗ್ವಾದ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿದಾಗ ಕೋಪದ ಭರದಲ್ಲಿ ಶುಭಂ, ಕೋಮಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಆಕೆಯ ತಲೆ ಮತ್ತು ಕುತ್ತಿಗೆಯ ಭಾಗಕ್ಕೆ ಬಲವಾಗಿ ಒದ್ದು, ಗುದ್ದಿದ್ದರಿಂದ ಕೋಮಲ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ರಾತ್ರಿಯಿಡೀ ಮೃತದೇಹದ ಬಳಿಯೇ ಕುಳಿತ ಆರೋಪಿ
ತನ್ನ ಪ್ರಿಯತಮೆ ಮೃತಪಟ್ಟಿರುವುದನ್ನು ಕಂಡ ಶುಭಂ ಅಲ್ಲಿಂದ ಪರಾರಿಯಾಗದೆ, ಇಡೀ ರಾತ್ರಿ ಆಕೆಯ ಶವದ ಪಕ್ಕದಲ್ಲೇ ಕುಳಿತಿದ್ದಾನೆ. ಬೆಳಗಾದ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ ತಾನು ಮಾಡಿದ ಕೃತ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಹಿಂಜೇವಾಡಿ ಪೊಲೀಸರು ಕೋಮಲ್ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಸದ್ಯ ಆರೋಪಿ ಶುಭಂನನ್ನು ವಶಕ್ಕೆ ಪಡೆದಿರುವ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


















