ನವದೆಹಲಿ: ಬಣ್ಣವಿಲ್ಲದ, ರುಚಿಯಿಲ್ಲದ, ಸುರಕ್ಷಿತ ಸರಳ ಪಾನೀಯ ಎಂದೇ ಭಾವಿಸಿ ನಾವು ಖರೀದಿಸುವ ಪ್ಯಾಕೇಜ್ಡ್ ಕುಡಿಯುವ ನೀರು ಈಗ ವಿವಾದದ ಕೇಂದ್ರಬಿಂದುವಾಗಿದೆ. ಜನಪ್ರಿಯ ‘ಬಿಸ್ಲೆರಿ’ ಕಂಪನಿಯ ನೀರಿನ ಮಾದರಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚಿನ ಪ್ರಮಾಣದ ‘ಬ್ರೋಮೇಟ್’ (Bromate) ಅಂಶ ಪತ್ತೆಯಾಗಿದೆ ಎಂಬ ಕಾರಣಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್ಎಸ್ಎಐ)ವು ಇದೀಗ ಕಂಪನಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ, ಕುಡಿಯುವ ನೀರಿನಲ್ಲಿ ಈ ಅಪಾಯಕಾರಿ ರಾಸಾಯನಿಕ ಹೇಗೆ ಸೇರುತ್ತದೆ ಮತ್ತು ಇದರಿಂದ ಆರೋಗ್ಯಕ್ಕೆ ಎಷ್ಟು ಹಾನಿಯಿದೆ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಬ್ರೋಮೇಟ್ ಅನ್ನು ನೀರಿಗೆ ಸೇರಿಸಲಾಗುತ್ತದೆಯೇ?
ವಾಸ್ತವವಾಗಿ, ಬ್ರೋಮೇಟ್ ಅನ್ನು ಯಾರೂ ಬಾಟಲಿ ನೀರಿಗೆ ಪ್ರತ್ಯೇಕವಾಗಿ ಬೆರೆಸುವುದಿಲ್ಲ; ಅದೊಂದು ಸಂರಕ್ಷಕವೂ ಅಲ್ಲ. ಬದಲಾಗಿ, ನೀರನ್ನು ಶುದ್ಧೀಕರಿಸುವ ಪ್ರಕ್ರಿಯೆಯಲ್ಲಿ ಉಂಟಾಗುವ ಒಂದು ಉಪ-ಉತ್ಪನ್ನ ಇದಾಗಿದೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಮತ್ತು ವೈರಸ್ಗಳನ್ನು ಕೊಲ್ಲಲು ಕಂಪನಿಗಳು ಸಾಮಾನ್ಯವಾಗಿ ‘ಓಝೋನ್’ (Ozone) ಅನಿಲವನ್ನು ಬಳಸುತ್ತವೆ. ಅಂತರ್ಜಲದಲ್ಲಿ ಬಂಡೆಗಳು ಮತ್ತು ಸಮುದ್ರದ ನೀರಿನಲ್ಲಿ ‘ಬ್ರೋಮೈಡ್’ (Bromide) ಎಂಬ ನೈಸರ್ಗಿಕ ಲವಣಾಂಶ ಇರುತ್ತದೆ.
ಪ್ರಬಲ ಆಕ್ಸಿಡೈಸರ್ ಆಗಿರುವ ಓಝೋನ್ ಅನಿಲವು ನೀರಿನಲ್ಲಿರುವ ಬ್ರೋಮೈಡ್ ಜೊತೆ ರಾಸಾಯನಿಕ ಕ್ರಿಯೆ ನಡೆಸಿದಾಗ ಬ್ರೋಮೇಟ್ ಉತ್ಪತ್ತಿಯಾಗುತ್ತದೆ. ಮೂಲ ನೀರಿನಲ್ಲಿ ಬ್ರೋಮೈಡ್ ಹೆಚ್ಚಿದ್ದಷ್ಟೂ ಮತ್ತು ಓಝೋನ್ ಪ್ರಮಾಣ ಅಧಿಕವಾದಷ್ಟೂ ಬ್ರೋಮೇಟ್ ಹೆಚ್ಚು ಉತ್ಪತ್ತಿಯಾಗುತ್ತದೆ. ಒಮ್ಮೆ ಇದು ರೂಪುಗೊಂಡರೆ, ಸಾಮಾನ್ಯ ಫಿಲ್ಟರ್ಗಳ ಮೂಲಕ ಇದನ್ನು ತೆಗೆಯುವುದು ಕಷ್ಟ.
ಬಿಸ್ಲೆರಿ ಪ್ರಕರಣದಲ್ಲಿ ಏನಾಯಿತು?
ಇದೀಗ ಎಫ್ಎಸ್ಎಸ್ಎಐ, 2006ರ ಆಹಾರ ಸುರಕ್ಷತೆ ಕಾಯ್ದೆಯಡಿ ಬಿಸ್ಲೆರಿ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲು ಅನುಮತಿ ನೀಡಿದೆ. 2025ರ ಸೆಪ್ಟೆಂಬರ್ನಲ್ಲಿ ಗೋವಾದ ಘಟಕದಿಂದ ಸಂಗ್ರಹಿಸಲಾದ ಆರು ಮಾದರಿಗಳ ಪೈಕಿ ಒಂದರಲ್ಲಿ ಪ್ರತಿ ಲೀಟರ್ಗೆ 12 ಮೈಕ್ರೋಗ್ರಾಂ ಬ್ರೋಮೇಟ್ ಪತ್ತೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತದ ಮಾನದಂಡಗಳ ಪ್ರಕಾರ ಈ ಮಿತಿ 10 ಮೈಕ್ರೋಗ್ರಾಂ ಮಾತ್ರ ಇರಬೇಕು.
ಕಂಪನಿಯ ಮೇಲ್ಮನವಿಯ ನಂತರ ರೆಫರಲ್ ಪ್ರಯೋಗಾಲಯದಲ್ಲಿ ನಡೆದ ಮರುಪರೀಕ್ಷೆಯಲ್ಲಿ ಬ್ರೋಮೇಟ್ ಮಿತಿಯೊಳಗಿದ್ದರೂ, ಇಂಧನ ಅಥವಾ ಕಟ್ಟಿಗೆ ಅಪೂರ್ಣವಾಗಿ ಉರಿದಾಗ ಉಂಟಾಗುವ ‘ಪಾಲಿನ್ಯೂಕ್ಲಿಯರ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್ಗಳು’ (PAHs) ಪತ್ತೆಯಾದ ಕಾರಣ ಮಾದರಿಯನ್ನು ಅಸುರಕ್ಷಿತ ಎಂದು ಘೋಷಿಸಲಾಗಿದೆ. ಆದರೆ, ಸ್ವತಂತ್ರ ಪ್ರಯೋಗಾಲಯದಲ್ಲಿ ತಮ್ಮ ನೀರು ಸುರಕ್ಷಿತ ಎಂದು ಸಾಬೀತಾಗಿದೆ ಎಂದು ಬಿಸ್ಲೆರಿ ವಾದಿಸಿದೆ.
ಆರೋಗ್ಯದ ಮೇಲೆ ಇದರ ಪರಿಣಾಮವೇನು?
ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು 1999ರಲ್ಲೇ ಪೊಟ್ಯಾಶಿಯಂ ಬ್ರೋಮೇಟ್ ಅನ್ನು ‘ಮನುಷ್ಯರಿಗೆ ಕ್ಯಾನ್ಸರ್ ತರಬಹುದಾದ ಸಂಭಾವ್ಯ ರಾಸಾಯನಿಕ’ ಎಂದು ವರ್ಗೀಕರಿಸಿದೆ. ಪ್ರಾಣಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಕಿಡ್ನಿ ಮತ್ತು ಥೈರಾಯ್ಡ್ ಕ್ಯಾನ್ಸರ್ಗೆ ಕಾರಣವಾಗಿರುವುದು ದೃಢಪಟ್ಟಿದೆ.
ಮನುಷ್ಯರು ಒಂದೇ ಒಂದು ಬಾಟಲಿ ನೀರು ಕುಡಿದ ತಕ್ಷಣ ಅನಾರೋಗ್ಯಕ್ಕೆ ತುತ್ತಾಗುವುದಿಲ್ಲವಾದರೂ, ನಿಗದಿತ ಮಿತಿಗಿಂತ ಹೆಚ್ಚಿನ ಬ್ರೋಮೇಟ್ ಇರುವ ನೀರನ್ನು ವರ್ಷಗಳ ಕಾಲ ಪ್ರತಿದಿನ ಸೇವಿಸುತ್ತಾ ಬಂದರೆ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು. 2016ರಲ್ಲಿ ದೆಹಲಿಯ ಬ್ರೆಡ್ ಮಾದರಿಗಳಲ್ಲಿ ಈ ರಾಸಾಯನಿಕ ಪತ್ತೆಯಾದ ಬಳಿಕ ಭಾರತದಲ್ಲಿ ಆಹಾರ ಪದಾರ್ಥಗಳಿಗೆ ಇದನ್ನು ಬೆರೆಸುವುದನ್ನು ನಿಷೇಧಿಸಲಾಗಿತ್ತು.
ತಡೆಗಟ್ಟುವಿಕೆ ಹೇಗೆ?
ಉತ್ಪಾದನಾ ಘಟಕಗಳಲ್ಲೇ ಓಝೋನ್ ಬಳಕೆಗೂ ಮುನ್ನ ‘ರಿವರ್ಸ್ ಆಸ್ಮೋಸಿಸ್’ (RO) ಪ್ರಕ್ರಿಯೆಯ ಮೂಲಕ ನೀರಿನಿಂದ ಬ್ರೋಮೈಡ್ ಅನ್ನು ಬೇರ್ಪಡಿಸುವ ಮೂಲಕ ಬ್ರೋಮೇಟ್ ಉತ್ಪತ್ತಿಯನ್ನು ತಡೆಯಬಹುದು. ಗ್ರಾಹಕರಿಗೆ ಈ ರಾಸಾಯನಿಕವನ್ನು ಕಣ್ಣಿನಿಂದ ನೋಡಲು ಅಥವಾ ರುಚಿಯ ಮೂಲಕ ಗುರುತಿಸಲು ಸಾಧ್ಯವಿಲ್ಲ. ಅಲ್ಲದೆ, ನೀರನ್ನು ಕುದಿಸುವುದರಿಂದ ಬ್ರೋಮೇಟ್ ನಾಶವಾಗುವುದಿಲ್ಲ; ಬದಲಾಗಿ ಅದರ ಸಾಂದ್ರತೆ ಮತ್ತಷ್ಟು ಹೆಚ್ಚಾಗಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಆದರೆ ಮನೆಗಳಲ್ಲಿ ಬಳಸುವ ಆರ್ಒ ಫಿಲ್ಟರ್ಗಳು ಇದನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ. ಹೀಗಾಗಿ ಬಾಟಲಿ ನೀರು ಖರೀದಿಸುವಾಗ ಕಡ್ಡಾಯವಾಗಿ ಐಎಸ್ಐ (ISI) ಮುದ್ರೆ ಮತ್ತು ಎಫ್ಎಸ್ಎಸ್ಎಐ ಪರವಾನಗಿ ಸಂಖ್ಯೆಯನ್ನು ಪರಿಶೀಲಿಸುವುದು ಅತ್ಯಗತ್ಯ.


















