ಅಮೃತಸರ: ಕಾನೂನು ರಕ್ಷಿಸಬೇಕಾದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಕಂಠಪೂರ್ತಿ ಕುಡಿದು ಅತಿವೇಗವಾಗಿ ಕಾರು ಚಲಾಯಿಸಿ, ಶಾಲೆಯಿಂದ ಮನೆಗೆ ಮರಳುತ್ತಿದ್ದ 12 ವರ್ಷದ ಬಾಲಕಿಯ ಮೇಲೆ ಹರಿಸಿರುವ ಆಘಾತಕಾರಿ ಘಟನೆ ಪಂಜಾಬ್ನ ಅಮೃತಸರದಲ್ಲಿ ನಡೆದಿದೆ. ಅಪಘಾತದಲ್ಲಿ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದು, ಆರೋಪಿ ಪೊಲೀಸ್ ಪೇದೆಯನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಪಘಾತದ ತೀವ್ರತೆಗೆ ಬಾಲಕಿ ಕಾರಿನ ಅಡಿಯಲ್ಲಿ ಸಿಲುಕಿಕೊಂಡಿದ್ದಳು. ತಕ್ಷಣವೇ ಧಾವಿಸಿದ ಸ್ಥಳೀಯರು ಮತ್ತು ದಾರಿಹೋಕರು ಹರಸಾಹಸಪಟ್ಟು ಬಾಲಕಿಯನ್ನು ಕಾರಿನಡಿಯಿಂದ ಹೊರತೆಗೆದು ರಕ್ಷಿಸಿದ್ದಾರೆ. ಆರೋಪಿಯನ್ನು ಪೊಲೀಸ್ ಕಾನ್ಸ್ಟೇಬಲ್ ಅಮೃತ್ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಘಟನೆಯ ಸಮಯದಲ್ಲಿ ಪೇದೆ ವಿಪರೀತ ಮದ್ಯಪಾನ ಮಾಡಿದ್ದ ಎಂದು ಅಂಬೇಡ್ಕರ್ ಸಮಾಜ ದಳದ ಯುವ ಘಟಕದ ಅಧ್ಯಕ್ಷ ರಾಹುಲ್ ಸೋರಿ ಆರೋಪಿಸಿದ್ದಾರೆ. ಆರೋಪಿಗೆ ಸರಿಯಾಗಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ, ಕಣ್ಣುಗಳು ಮುಚ್ಚುತ್ತಿದ್ದವು ಮತ್ತು ಆತ ವಾಂತಿ ಮಾಡಿಕೊಳ್ಳುತ್ತಿದ್ದ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯರು ಆತನ ಆಲ್ಟೊ ಕಾರನ್ನು ಪರಿಶೀಲಿಸಿದಾಗ ಒಳಗೆ ಮದ್ಯದ ಬಾಟಲಿ, ಸಿಗರೇಟ್ ಮತ್ತು ಲೈಟರ್ ಪತ್ತೆಯಾಗಿದೆ.
ಪರಾರಿಯಾಗಲು ಯತ್ನಿಸಿದ ಪೇದೆ
ಅಪಘಾತ ಸಂಭವಿಸಿದ ತಕ್ಷಣ ಗಾಯಗೊಂಡ ಬಾಲಕಿಗೆ ನೆರವಾಗುವ ಬದಲು, ಆರೋಪಿ ಕಾನ್ಸ್ಟೇಬಲ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದ ಎಂದು ಅಂಬೇಡ್ಕರ್ ಸಮಾಜ ದಳದ ಪಂಜಾಬ್ ಅಧ್ಯಕ್ಷ ವಿಕ್ಕಿ ಆರೋಪಿಸಿದ್ದಾರೆ. ಆದರೆ, ಅಲ್ಲಿದ್ದ ಸ್ಥಳೀಯರು ಮತ್ತು ಯುವಕರು ತಕ್ಷಣವೇ ಕಾರನ್ನು ಸುತ್ತುವರಿದು ಆತ ತಪ್ಪಿಸಿಕೊಳ್ಳದಂತೆ ತಡೆದಿದ್ದಾರೆ. ಪೊಲೀಸ್ ಸಿಬ್ಬಂದಿಯ ದುರ್ವರ್ತನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದು, ಬಳಿಕ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಅನಾಥ ಬಾಲಕಿಯ ಕುಟುಂಬದಿಂದ ನ್ಯಾಯಕ್ಕಾಗಿ ಆಗ್ರಹ
ಗಾಯಗೊಂಡ ಬಾಲಕಿಯು ಈಗಾಗಲೇ ತನ್ನ ತಂದೆ-ತಾಯಿ ಹಾಗೂ ಅಜ್ಜ-ಅಜ್ಜಿಯನ್ನು ಕಳೆದುಕೊಂಡಿದ್ದಾಳೆ ಎಂದು ಆಕೆಯ ಚಿಕ್ಕಮ್ಮ ಪ್ರೀತಿ ಕಣ್ಣೀರಿಟ್ಟಿದ್ದಾರೆ. ಕುಟುಂಬವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಮನೆಯಲ್ಲಿ ಹಲವರು ದೈಹಿಕ ವಿಕಲಚೇತನರಾಗಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿದೆ. ಬಾಲಕಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಕೊಡಿಸಬೇಕು ಹಾಗೂ ತಪ್ಪಿತಸ್ಥ ಕಾನ್ಸ್ಟೇಬಲ್ನನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಡಳಿತವನ್ನು ಒತ್ತಾಯಿಸಿದ್ದಾರೆ.
ಆರೋಪಿ ವಶಕ್ಕೆ, ವೈದ್ಯಕೀಯ ಪರೀಕ್ಷೆಗೆ ರವಾನೆ
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರ ನೆರವಿನಿಂದ ಆರೋಪಿ ಕಾನ್ಸ್ಟೇಬಲ್ನನ್ನು ವಶಕ್ಕೆ ಪಡೆದು ಆತನ ಕಾರನ್ನು ಜಪ್ತಿ ಮಾಡಿದ್ದಾರೆ. ಗಾಯಗೊಂಡ ಬಾಲಕಿಯನ್ನು ಚಿಕಿತ್ಸೆ ಹಾಗೂ ವೈದ್ಯಕೀಯ ಪರೀಕ್ಷೆಗೆ ದಾಖಲಿಸಲಾಗಿದೆ. ಪೇದೆ ಮದ್ಯಪಾನ ಮಾಡಿದ್ದ ಎಂಬ ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ, ಆತನನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆ ಮತ್ತು ವೈದ್ಯಕೀಯ ವರದಿಯ ಆಧಾರದ ಮೇಲೆ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.


















