ದೆಹಲಿ: ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯುವಕನೊಬ್ಬ ಕೆಲಕಾಲ ಆತಂಕ ಸೃಷ್ಟಿಸಿದ್ದಾನೆ. ಹರಿಯಾಣದ ಸೋನಿಪತ್ ಮೂಲದ ಈ ಯುವಕ ಯಾವುದೇ ದಾಖಲೆಗಳಿಲ್ಲದೆ ಟರ್ಮಿನಲ್ 3ರ ಬಳಿ ಒಳನುಗ್ಗಲು ಯತ್ನಿಸಿದ್ದಾನೆ. ಭದ್ರತಾ ಸಿಬ್ಬಂದಿ ಗುರುತಿನ ಚೀಟಿ ಕೇಳಿದಾಗ ಅವರೊಂದಿಗೆ ಕಿರಿಕ್ ಮಾಡಿದ್ದಾನೆ. ಅಲ್ಲದೆ ಸಿಐಎಸ್ಎಫ್ ಸಿಬ್ಬಂದಿಯನ್ನು ತಳ್ಳಿ ಒಳಗೆ ನುಗ್ಗಲು ಮುಂದಾಗಿದ್ದಾನೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಸುತ್ತುವರಿದು ಕೇವಲ 10 ಸೆಕೆಂಡ್ಗಳಲ್ಲಿ ವಶಕ್ಕೆ ಪಡೆದಿದ್ದಾರೆ. ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ದೊಡ್ಡ ಭದ್ರತಾ ಲೋಪ ತಪ್ಪಿದಂತಾಗಿದೆ. ಬಂಧಿತ ಯುವಕ ಮಾನಸಿಕ ಅಸ್ವಸ್ಥ ಅಥವಾ ಮಾದಕ ವ್ಯಸನಿಯಾಗಿರಬಹುದು ಎಂದು ಶಂಕಿಸಲಾಗಿದೆ. ಆತನ ಬ್ಯಾಗ್ ತಪಾಸಣೆ ನಡೆಸಿದಾಗ ಆಧಾರ್, ಪ್ಯಾನ್ ಕಾರ್ಡ್, ಮೊಬೈಲ್ ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ಪ್ರಮಾಣಪತ್ರಗಳು ಪತ್ತೆಯಾಗಿವೆ. ಸದ್ಯ ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.


















