ನವದೆಹಲಿ: ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳಿದ್ದರೂ, ವಿರೋಧ ಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವುದಿಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ವೇಳೆ ತಾವು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದರೆ ಅಥವಾ ಬಹಿಷ್ಕರಿಸಿದರೆ, ಆ ಕ್ಷಣವೇ ಭಾರತೀಯ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅಂತ್ಯಗೊಳಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
2014ರ ಚುನಾವಣಾ ಅಕ್ರಮದ ಸಾಕ್ಷ್ಯವಿದ್ದರೂ ಮೌನವಾಗಿದ್ದೆವು
2014ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ತಮ್ಮ ಬಳಿ ಸಾಕ್ಷ್ಯಗಳಿದ್ದವು. ಆದರೆ ಪಕ್ಷದ ಹಿರಿಯ ನಾಯಕರ ಸಲಹೆಯ ಮೇರೆಗೆ ಆ ವಿಷಯವನ್ನು ಬಹಿರಂಗಪಡಿಸಲಿಲ್ಲ ಎಂದು ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಆ ಚುನಾವಣೆಯಲ್ಲಿ ಕಂಡುಬಂದ ಅಸಾಮಾನ್ಯ ಮತ್ತು ವಿವರಿಸಲಾಗದ ಗೆಲುವಿನ ಅಂತರವು ಪಕ್ಷದೊಳಗೆ ಅನುಮಾನ ಹುಟ್ಟುಹಾಕಿತ್ತು. ನಂತರ ತಮಗೆ ಸಾಕ್ಷ್ಯಗಳು ಲಭಿಸಿ, ಅದನ್ನು ಪಕ್ಷದ ಹಿರಿಯ ನಾಯಕರಿಗೆ ತೋರಿಸಿದಾಗ, ‘ದಯವಿಟ್ಟು ಇದನ್ನು ಬಹಿರಂಗವಾಗಿ ಹೇಳಬೇಡಿ’ ಎಂದು ಅವರು ಸಲಹೆ ನೀಡಿದ್ದಾಗಿ ರಾಹುಲ್ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಭಾರತೀಯ ಪ್ರಜಾಪ್ರಭುತ್ವವನ್ನು ಪವಿತ್ರವೆಂದು ಭಾವಿಸುತ್ತದೆ. ಹೀಗಾಗಿ, ನೂರಕ್ಕೆ ನೂರು, ಇನ್ನೂರು ಅಥವಾ ಮುನ್ನೂರು ಪಟ್ಟು ಖಚಿತ ಪುರಾವೆಗಳಿಲ್ಲದೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೋಷವಿದೆ ಎಂದು ಹೇಳುವುದು ಕಷ್ಟಕರವಾಗಿತ್ತು ಎಂದು ಅವರು ವಿವರಿಸಿದ್ದಾರೆ.
ಚುನಾವಣಾ ವ್ಯವಸ್ಥೆಯೊಳಗಿದ್ದುಕೊಂಡೇ ಹೋರಾಟ
ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಅನುಮಾನಗಳಿದ್ದರೂ ಕಾಂಗ್ರೆಸ್ ಏಕೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದರೆ ತಾವು ರಕ್ಷಿಸಲು ಹೋರಾಡುತ್ತಿರುವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೈಬಿಟ್ಟಂತಾಗುತ್ತದೆ ಎಂದರು. ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂಬುದು ಭಾರತದ ಜನರಿಗೆ ಅರಿವಾಗುವವರೆಗೂ, ರಾಜಕೀಯ ಹಿನ್ನಡೆಗಳಾದರೂ ಸರಿ, ಚುನಾವಣೆಗಳಲ್ಲಿ ಸ್ಪರ್ಧಿಸುತ್ತಲೇ ಅಕ್ರಮಗಳನ್ನು ಬಯಲಿಗೆಳೆಯುವುದು ತಮ್ಮ ಕಾರ್ಯತಂತ್ರವಾಗಿದೆ ಎಂದು ಅವರು ಹೇಳಿದ್ದಾರೆ.
ಚುನಾವಣಾ ಆಯೋಗದ ಒಳಗಿನಿಂದಲೇ ಮಾಹಿತಿ ಸಿಗುತ್ತಿದೆ
ಚುನಾವಣಾ ಆಯೋಗದ ಕಾರ್ಯನಿರ್ವಹಣೆಯ ಬಗ್ಗೆ ಅದರೊಳಗಿನ ಅಧಿಕಾರಿಗಳೇ ಅಸಮಾಧಾನಗೊಂಡಿದ್ದು, ಆಯೋಗದ ಒಳಗಿನಿಂದಲೇ ತಮಗೆ ಮಾಹಿತಿಗಳು ಲಭಿಸುತ್ತಿವೆ ಎಂದು ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಆಯೋಗದ ಹಿರಿಯ ಅಧಿಕಾರಿಗಳೇ ಹೇಳುತ್ತಿದ್ದು, ಆ ವ್ಯವಸ್ಥೆ ಕುಸಿಯುವುದು ಕೇವಲ ಸಮಯದ ಪ್ರಶ್ನೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಅಕ್ರಮದ ಆರೋಪ
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರನ್ನು ಉದ್ದೇಶಿಸಿ ಮಾತನಾಡುವಾಗ 2024ರ ಚುನಾವಣೆ ಮತ್ತು ‘ಮತ ಕಳ್ಳತನ’ ಅಭಿಯಾನದ ಬಗ್ಗೆಯೂ ಪ್ರಸ್ತಾಪಿಸಿದ ರಾಹುಲ್, ನಕಲಿ ಅಥವಾ ಅನರ್ಹ ಮತದಾರರು ಪಟ್ಟಿಗೆ ಸೇರಿದರೆ ಚುನಾವಣೆಗಳು ಹೇಗೆ ವಿಶ್ವಾಸಾರ್ಹವಾಗಿರುತ್ತವೆ ಎಂದು ಪ್ರಶ್ನಿಸಿದರು. ಭಾರತಕ್ಕೆ ಎಂದಿಗೂ ಭೇಟಿ ನೀಡದ ಬ್ರೆಜಿಲ್ ಮಹಿಳೆಯೊಬ್ಬರು ಭಾರತದ ರಾಜ್ಯವೊಂದರ ಚುನಾವಣೆಯಲ್ಲಿ 23 ಬಾರಿ ಮತ ಚಲಾಯಿಸಿದ್ದಾರೆ ಎಂಬ ಉದಾಹರಣೆಯನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಚುನಾವಣಾ ಪ್ರಕ್ರಿಯೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ ಎಂದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವುದನ್ನು ಕಾಂಗ್ರೆಸ್ ಆಗಲಿ ಅಥವಾ ಬಹುಸಂಖ್ಯಾತ ಭಾರತೀಯರಾಗಲಿ ಒಪ್ಪಲು ಸಿದ್ಧರಿಲ್ಲ ಎಂದು ಅವರು ತಿಳಿಸಿದ್ದಾರೆ.



















