ಬೆಂಗಳೂರು: ಕೇಂದ್ರ ಸರ್ಕಾರದ ನೌಕರರು ಹಾಗೂ ಪಿಂಚಣಿದಾರರು ಬಹುನಿರೀಕ್ಷೆಯಿಂದ ಕಾಯುತ್ತಿರುವ 8ನೇ ವೇತನ ಆಯೋಗದ ಜಾರಿಗೆ (8th Pay Commission) ಸಂಬಂಧಿಸಿದ ಚರ್ಚೆಗಳು ಜೋರಾಗಿವೆ. ಹೊಸ ವೇತನ ಆಯೋಗದ ಜಾರಿಯೊಂದಿಗೆ ನೌಕರರ ಮೂಲವೇತನ ಮತ್ತು ಭತ್ಯೆಗಳಲ್ಲಿ ಭಾರಿ ಬದಲಾವಣೆಯಾಗುವ ನಿರೀಕ್ಷೆಯಿದೆ. ಇದರೊಂದಿಗೆ ನೌಕರರಿಗೆ ಸಿಗಲಿರುವ ಹಿಂಬಾಕಿ (Arrears) ಮತ್ತು ಫಿಟ್ ಮೆಂಟ್ ಫ್ಯಾಕ್ಟರ್ ಕುರಿತ ಲೆಕ್ಕಾಚಾರಗಳು ಈಗ ಆರ್ಥಿಕ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿವೆ. ಫಿಟ್ ಮೆಂಟ್ ಫ್ಯಾಕ್ಟರ್ ಅನ್ವಯ ನೌಕರರಿಗೆ 2-15 ಲಕ್ಷ ರೂ.ವರೆಗೆ ಅರಿಯರ್ಸ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.
ಫಿಟ್ ಮೆಂಟ್ ಫ್ಯಾಕ್ಟರ್ ಮತ್ತು ವೇತನ ಪರಿಷ್ಕರಣೆ
ವೇತನ ಆಯೋಗದ ಶಿಫಾರಸುಗಳಲ್ಲಿ ‘ಫಿಟ್ ಮೆಂಟ್ ಫ್ಯಾಕ್ಟರ್’ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ನೌಕರರ ಪ್ರಸ್ತುತ ಮೂಲವೇತನವನ್ನು ಹೊಸ ರಚನೆಗೆ ಪರಿವರ್ತಿಸಲು ಬಳಸುವ ಗುಣಕವಾಗಿದೆ. 7ನೇ ವೇತನ ಆಯೋಗದಲ್ಲಿ 2.57ರಷ್ಟು ಫಿಟ್ ಮೆಂಟ್ ಫ್ಯಾಕ್ಟರ್ ಅನ್ನು ಬಳಸಲಾಗಿತ್ತು. ಆದರೆ 8ನೇ ವೇತನ ಆಯೋಗದಲ್ಲಿ ನೌಕರರ ಸಂಘಟನೆಗಳು ಇದನ್ನು 3.83ರವರೆಗೆ ಹೆಚ್ಚಿಸಬೇಕು ಎಂದು ಬೇಡಿಕೆ ಮುಂದಿಟ್ಟಿವೆ. ಈ ಅಂಶವು ಅಂತಿಮವಾಗಿ ನೌಕರರ ಮಾಸಿಕ ವೇತನ ಮತ್ತು ಒಟ್ಟು ಹಿಂಬಾಕಿಯ ಮೊತ್ತವನ್ನು ನಿರ್ಧರಿಸಲಿದೆ.
ಹಿಂಬಾಕಿ (ಅರಿಯರ್ಸ್) ಲೆಕ್ಕಾಚಾರ ಹೇಗೆ?
ನಿಯಮಗಳ ಪ್ರಕಾರ 8ನೇ ವೇತನ ಆಯೋಗವು ಜಾರಿಗೆ ಬರುವ ದಿನಾಂಕದಿಂದ ಹಿಂಬಾಕಿ ಲೆಕ್ಕಹಾಕಲಾಗುತ್ತದೆ. ಸಂಭಾವ್ಯ ಲೆಕ್ಕಾಚಾರಗಳ ಪ್ರಕಾರ, ವಿವಿಧ ವೇತನ ಶ್ರೇಣಿಯ ನೌಕರರಿಗೆ ಲಕ್ಷಾಂತರ ರೂಪಾಯಿಗಳವರೆಗೆ ಎರಿಯರ್ಸ್ ಸಿಗುವ ಸಾಧ್ಯತೆಯಿದೆ. ಉದಾಹರಣೆಗೆ, ಅಂದಾಜು ಲೆಕ್ಕಾಚಾರಗಳ ಪ್ರಕಾರ ಕೆಲವು ನೌಕರರಿಗೆ ಫಿಟ್ ಮೆಂಟ್ ಫ್ಯಾಕ್ಟರ್ ಮತ್ತು ಜಾರಿಯ ಅವಧಿಯನ್ನು ಆಧರಿಸಿ ಸುಮಾರು 2.15 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಹಿಂಬಾಕಿ ಸಿಗಬಹುದು ಎಂದು ಅಂದುಜಿಸಲಾಗಿದೆ. ಇದು ಪ್ರತಿ ನೌಕರರ ಪ್ರಸ್ತುತ ಮೂಲವೇತನ ಮತ್ತು ಅವರ ಪೇ ಲೆವೆಲ್ ಅವಲಂಬಿಸಿ ಬದಲಾಗುತ್ತದೆ. ಫಿಟ್ ಮೆಂಟ್ ಫ್ಯಾಕ್ಟರ್ ಅನ್ವಯ ಇದು 15 ಲಕ್ಷ ರೂ.ವರೆಗೆ ಅರಿಯರ್ಸ್ ನೀಡಲಾಗುತ್ತದೆ.
ಸದ್ಯ ಸರ್ಕಾರಿ ಇಲಾಖೆಗಳಲ್ಲಿ ಮತ್ತು ನೌಕರರ ಸಂಘಟನೆಗಳ ನಡುವೆ ಈ ಕುರಿತು ಸಮಾಲೋಚನೆಗಳು ಮುಂದುವರೆದಿವೆ. ಆಯೋಗವು ತನ್ನ ಅಂತಿಮ ವರದಿಯನ್ನು ಸಲ್ಲಿಸಿದ ಬಳಿಕವಷ್ಟೇ ಅಧಿಕೃತ ಅಂಕಿ-ಅಂಶಗಳು ಹೊರಬರಲಿವೆ. ಆದಾಗ್ಯೂ, ಕೇಂದ್ರ ನೌಕರರು ಮತ್ತು ಪಿಂಚಣಿದಾರರು ಈ ಆಯೋಗದಿಂದ ತಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆಯಾಗುವ ವಿಶ್ವಾಸದಲ್ಲಿದ್ದಾರೆ.


















