ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಬೆಂಗಳೂರು ನಗರದಾದ್ಯಂತ ಕಸದ ರಾಶಿಗಳು ಪ್ರತ್ಯಕ್ಷವಾಗಿವೆ. ಹಬ್ಬದ ವೇಳೆ ಹೂವು, ಹಣ್ಣು, ಬಾಳೆಗಿಡ ಹಾಗೂ ಬೂದುಕುಂಬಳಕಾಯಿ ಸೇರಿದಂತೆ ಹಲವು ವಸ್ತುಗಳ ಮಾರಾಟ ನಡೆದಿತ್ತು. ವ್ಯಾಪಾರಸ್ಥರು ಮಾರಾಟವಾಗದೆ ಉಳಿದ ಕಸವನ್ನು ಮಾರುಕಟ್ಟೆಯಲ್ಲೇ ಬಿಟ್ಟು ಹೋಗಿದ್ದಾರೆ.
ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಸದ ರಾಶಿಗಳು ತುಂಬಿಕೊಂಡಿವೆ. ಅದರಲ್ಲೂ ಟಿ ದಾಸರಹಳ್ಳಿಯ ಮಾರುಕಟ್ಟೆ ಹಾಗೂ ಮುಖ್ಯರಸ್ತೆಯಲ್ಲೇ ರಾಶಿ ರಾಶಿ ಕಸ ಬಿದ್ದಿದೆ. ಇಷ್ಟೆಲ್ಲಾ ಕಸವಿದ್ದರೂ ಜಿಬಿಎ ಸಿಬ್ಬಂದಿಗಳು ಮಾತ್ರ ಕಸವನ್ನು ತೆರವು ಮಾಡಿಲ್ಲ. ಇದರಿಂದಾಗಿ ದುರ್ವಾಸನೆ ಹೆಚ್ಚಾಗಿದ್ದು, ಜನರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
















