ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್ಒ) ಇತ್ತೀಚೆಗೆ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿದೆ. ಆನ್ ಲೈನ್ ಮೂಲಕ ಕೆಲವೇ ದಿನಗಳಲ್ಲಿ ಪಿಎಫ್ ಖಾತೆಯ ಹಣ ವಿತ್ ಡ್ರಾ ಸೇರಿ ಹಲವು ಸೌಲಭ್ಯಗಳನ್ನು ನೀಡಿದೆ. ಇದರ ಬೆನ್ನಲ್ಲೇ, ಇಪಿಎಫ್ಒದ 1 ಲಕ್ಷ ಸದಸ್ಯರಿಗೆ ಗುಡ್ ನ್ಯೂಸ್ ನೀಡಿದೆ. ನಿಷ್ಕ್ರಿಯ ಖಾತೆಗಳಲ್ಲಿರುವ 1 ಸಾವಿರ ರೂಪಾಯಿವರೆಗಿನ ಮೊತ್ತವನ್ನು ಆಟೋ ಸೆಟಲ್ ಮೆಂಟ್ ಮೂಲಕ ಸದಸ್ಯರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಸೌಲಭ್ಯಕ್ಕೆ ಚಾಲನೆ ನೀಡಲಾಗಿದೆ.
ದೀರ್ಘಕಾಲದಿಂದ ಬಳಕೆಯಲ್ಲಿಲ್ಲದ ಅಥವಾ ನಿಷ್ಕ್ರಿಯಗೊಂಡಿರುವ (Inoperative) ಸಣ್ಣ ಮೊತ್ತದ ಪಿಎಫ್ ಖಾತೆಗಳಿಗಾಗಿ ಸ್ವಯಂಚಾಲಿತ ಕ್ಲೈಮ್ ಸೆಟಲ್ ಮೆಂಟ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ, ಆಧಾರ್ ಪರಿಶೀಲನೆಗೊಂಡು ಬ್ಯಾಂಕ್ ಖಾತೆಗೆ ಜೋಡಿಸಲ್ಪಟ್ಟಿರುವ ಮತ್ತು 1,000 ರೂಪಾಯಿವರೆಗೆ ಬ್ಯಾಲೆನ್ಸ್ ಹೊಂದಿರುವ ನಿಷ್ಕ್ರಿಯ ಖಾತೆಗಳಿಗೆ ಹಣವನ್ನು ನೇರವಾಗಿ ಸ್ವಯಂಚಾಲಿತವಾಗಿ ವರ್ಗಾಯಿಸಲಾಗುತ್ತದೆ.
ಈ ಹೊಸ ಉಪಕ್ರಮದಿಂದ ಸುಮಾರು 1 ಲಕ್ಷ ನಿಷ್ಕ್ರಿಯ ಖಾತೆಗಳಿಗೆ ಪ್ರಯೋಜನವಾಗಲಿದ್ದು, ಒಟ್ಟು5 ಕೋಟಿ ರೂಪಾಯಿಗಿಂತ ಅಧಿಕ ಹಣವು ನೇರವಾಗಿ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲಿದೆ ಎಂದು ತಿಳಿದುಬಂದಿದೆ. ಹಲವು ವರ್ಷಗಳಿಂದ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಗ್ರಾಹಕರು ಉಮಾಂಗ್ ಆ್ಯಪ್ ಮೂಲಕ ಸಕ್ರಿಯಗೊಳಿಸಬಹುದು.
ನೌಕರರು ತಮ್ಮ ಸಣ್ಣಪುಟ್ಟ ಹಳೆಯ ಉಳಿತಾಯ ಹಣವನ್ನು ಹಿಂಪಡೆಯಲು ಯಾವುದೇ ಕಾಗದಪತ್ರಗಳ ಅಥವಾ ಪ್ರತ್ಯೇಕ ಅರ್ಜಿಗಳ ಪ್ರಕ್ರಿಯೆ ನಡೆಸುವ ಅಗತ್ಯವಿರುವುದಿಲ್ಲ. ಇಪಿಎಫ್ಒದ ಈ ಜನಸ್ನೇಹಿ ಹಾಗೂ ತಂತ್ರಜ್ಞಾನ ಆಧಾರಿತ ಹೆಜ್ಜೆಯು ಕೋಟ್ಯಂತರ ಚಂದಾದಾರರಿಗೆ ದೈನಂದಿನ ವಹಿವಾಟುಗಳನ್ನು ಅತ್ಯಂತ ಸುಲಭಗೊಳಿಸಲಿದೆ.



















