ಬೆಂಗಳೂರು: ಭಾರತೀಯ ಸ್ಟೇಟ್ ಬ್ಯಾಂಕ್ (SBI Card) ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರಮುಖ ಮಾಹಿತಿಯೊಂದಿದೆ. ಎಸ್ ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳಾಗಿದ್ದು, ಮುಂಬರುವ ಡಿಸೆಂಬರ್ 1ರಿಂದ ಕೆಲವು ನಿರ್ದಿಷ್ಟ ವಹಿವಾಟುಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸಲು ಬ್ಯಾಂಕ್ ನಿರ್ಧರಿಸಿದೆ. ವಿಶೇಷವಾಗಿ ಸಾರಿಗೆ (Transportation) ಮತ್ತು ಇಂಧನ (Fuel) ವೆಚ್ಚಗಳಿಗೆ ಸಂಬಂಧಿಸಿದಂತೆ ಹೊಸ ಶುಲ್ಕ ರಚನೆಯು ಜಾರಿಗೆ ಬರಲಿದೆ.
ಸಾರಿಗೆ ವಹಿವಾಟುಗಳ ಮೇಲೆ ಶೇ.1ರಷ್ಟು ಶುಲ್ಕ
ಹೊಸ ನಿಯಮಗಳ ಪ್ರಕಾರ, ಡಿಸೆಂಬರ್ 1ರಿಂದ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ನಿರ್ದಿಷ್ಟ ಸಾರಿಗೆ ಪಾವತಿಗಳು 30,000 ರೂ. ದಾಟಿದರೆ, ಅಂಥ ಪ್ರತಿ ವಹಿವಾಟಿನ ಮೇಲೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ಅನ್ವಯವಾಗಲಿದೆ. ಉದಾಹರಣೆಗೆ, ಗ್ರಾಹಕರು 35,000 ರೂ. ಮೌಲ್ಯದ ಸಾರಿಗೆ ಪಾವತಿಯನ್ನು ಕಾರ್ಡ್ ಮೂಲಕ ಮಾಡಿದರೆ, ಶೇ.1ರಂತೆ ಹೆಚ್ಚುವರಿಯಾಗಿ 350 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಮಿತಿಯು ಬಿಲ್ಲಿಂಗ್ ಸೈಕಲ್ ವಹಿವಾಟುಗಳಿಗೆ ಅನ್ವಯಿಸುತ್ತದೆಯೇ ಹೊರತು ಇಡೀ ತಿಂಗಳ ಒಟ್ಟು ಮೊತ್ತಕ್ಕಲ್ಲ.
ಇಂಧನ ಖರೀದಿಗೆ ಹೊಸ ಮಿತಿ
ಇಂಧನ ವೆಚ್ಚದ ವಿಚಾರದಲ್ಲೂ ನಿಯಮಗಳು ಬದಲಾಗಿವೆ. ಒಂದು ಬಿಲ್ಲಿಂಗ್ ಸೈಕಲ್ ನಲ್ಲಿ ಒಟ್ಟು ಇಂಧನ ಖರೀದಿಯ ಮೊತ್ತವು 50,000 ರೂ. ದಾಟಿದರೆ, ಒಟ್ಟು ಇಂಧನ ಖರ್ಚಿನ ಮೇಲೆ ಶೇ.1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅಂದರೆ ತಿಂಗಳ ಒಟ್ಟು ಇಂಧನ ಬಿಲ್ 50,000 ರೂ. ಮೀರಿದರೆ, ಶೇ.1ರಷ್ಟು ಶುಲ್ಕ ಕಡಿತಗೊಳ್ಳಲಿದೆ.
ಉದಾಹರಣೆಗೆ ಒಟ್ಟು ಇಂಧನ ಖರ್ಚು 55,000 ರೂ. ಇದ್ದರೆ, ಸಂಪೂರ್ಣ ಮೊತ್ತದ ಮೇಲೆ ಶೇ.1ರಂತೆ 550 ರೂ. ಶುಲ್ಕ ತೆರಬೇಕಾಗುತ್ತದೆ. ಈ ಹೊಸ ಬದಲಾವಣೆಗಳು ಎಸ್ ಬಿಐನ ಎಲ್ಲ ಮಾದರಿಯ ಕ್ರೆಡಿಟ್ ಕಾರ್ಡ್ ಗಳಿಗೂ ಅನ್ವಯವಾಗಲಿವೆ. ಹೀಗಾಗಿ ಅಧಿಕ ಮೊತ್ತದ ಇಂಧನ ಮತ್ತು ಸಾರಿಗೆ ವೆಚ್ಚ ಮಾಡುವ ಗ್ರಾಹಕರು ಇನ್ನು ಮುಂದೆ ತಮ್ಮ ಖರ್ಚಿನ ಮೇಲಿನ ಮಿತಿಯನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್ ಬಿಐ ಕಾರ್ಡ್ನ ಅಧಿಕೃತ ವೆಬ್ ಸೈಟ್ ಅನ್ನು ಪರಿಶೀಲಿಸಬಹುದಾಗಿದೆ.



















