ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಬಹುನಿರೀಕ್ಷಿತ ನಮ್ಮ ಮೆಟ್ರೋದ ಪಿಂಕ್ ಲೈನ್ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಈ ಮೊದಲು ನವೆಂಬರ್ 15ರಂದು ನಿಗದಿಯಾಗಿದ್ದ ಉದ್ಘಾಟನಾ ಕಾರ್ಯಕ್ರಮವನ್ನು ಇದೀಗ ನವೆಂಬರ್ 13ಕ್ಕೆ ಬದಲಾಯಿಸಲಾಗಿದೆ. ಒಟ್ಟು 21.25 ಕಿಲೋಮೀಟರ್ ಉದ್ದ ಹಾಗೂ 18 ನಿಲ್ದಾಣಗಳನ್ನು ಒಳಗೊಂಡಿರುವ ಈ ಪಿಂಕ್ ಮೆಟ್ರೋ ಮಾರ್ಗವು ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸಲಿದೆ.
ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆಯವರೆಗಿನ 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ (ಎತ್ತರಿಸಿದ) ಮೆಟ್ರೋ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದ್ದು, ಇದರಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಹಾಗೂ ತಾವರೆಕೆರೆ ನಿಲ್ದಾಣಗಳು ಕಾರ್ಯಾರಂಭ ಮಾಡಲಿವೆ.
ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಹಳದಿ ಮಾರ್ಗದೊಂದಿಗೆ ಸಂಪರ್ಕ ಸೌಲಭ್ಯವಿದ್ದು, ಇದರಿಂದ ಬನ್ನೇರುಘಟ್ಟ ರಸ್ತೆ, ಹುಳಿಮಾವು, ಜಯದೇವ ಆಸ್ಪತ್ರೆ ಸುತ್ತಮುತ್ತಲಿನ ಪ್ರಯಾಣಿಕರಿಗೆ ಭಾರಿ ಅನುಕೂಲವಾಗಲಿದೆ. ಇನ್ನುಳಿದಂತೆ ಡೈರಿ ಸರ್ಕಲ್ನಿಂದ ನಾಗವಾರದವರೆಗಿನ 13.76 ಕಿಲೋಮೀಟರ್ ಭೂಗತ ಸುರಂಗ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದ್ದು, ಇದು ಎಂಜಿ ರಸ್ತೆ, ಶಿವಾಜಿನಗರ ಸೇರಿದಂತೆ ಪ್ರಮುಖ ಪ್ರದೇಶಗಳಿಗೆ ಮೆಟ್ರೋ ಸಂಪರ್ಕ ಕಲ್ಪಿಸಲಿದೆ. ಈ ಪೂರ್ಣ ಪಿಂಕ್ ಲೈನ್ ಮಾರ್ಗವು 2027ರಲ್ಲಿ ಸಂಪೂರ್ಣ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ. ಈ ಮೊದಲ ಹಂತದ ಉದ್ಘಾಟನೆಯ ಬಳಿಕ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103.6 ಕಿಲೋಮೀಟರ್ಗೆ ವಿಸ್ತರಣೆಯಾಗಲಿದೆ.



















