ಚಂಡೀಗಢ: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಪಂಜಾಬ್ನಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಾರ್ಟಿಗೆ (ಎಎಪಿ) ಭಾರೀ ಹಿನ್ನಡೆಯಾಗಿದೆ. ಪಕ್ಷದಿಂದ ಅಮಾನತುಗೊಂಡಿದ್ದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಅಮೃತಸರ ಉತ್ತರ ಕ್ಷೇತ್ರದ ಶಾಸಕ ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಕಳೆದ ಎರಡು ದಿನಗಳಲ್ಲಿ ಒಟ್ಟು ಮೂವರು ಆಪ್ ಶಾಸಕರು ರಾಜೀನಾಮೆ ನೀಡಿದಂತಾಗಿದೆ. ಅಲ್ಲದೆ, ಇವರೆಲ್ಲರೂ ಸದ್ಯದಲ್ಲೇ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಪಂಜಾಬ್ ವಿಧಾನಸಭೆಯ ಸಭಾಪತಿ ಕುಲ್ತಾರ್ ಸಿಂಗ್ ಸಂಧ್ವಾನ್ ಅವರಿಗೆ ರವಾನಿಸಿದ್ದಾರೆ. ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಅಮೃತಸರದ ನನ್ನ ಗೌರವಾನ್ವಿತ ಸಹೋದರ-ಸಹೋದರಿಯರೇ, ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನೀವು ನನ್ನ ಮೇಲಿಟ್ಟ ಪ್ರೀತಿ ಮತ್ತು ಗೌರವಕ್ಕೆ ನನ್ನ ಕೊನೆಯ ಉಸಿರಿರುವವರೆಗೆ ಋಣಿಯಾಗಿರುತ್ತೇನೆ,” ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ
ರಾಜೀನಾಮೆ ಬೆನ್ನಲ್ಲೇ ಆಡಳಿತಾರೂಢ ಸರ್ಕಾರದ ವಿರುದ್ಧ ಹರಿದಾಯ್ದ ಅವರು, “ಪಂಜಾಬ್ ಇಂದು ಮಾದಕವಸ್ತು, ಸುಲಿಗೆ, ಗ್ಯಾಂಗ್ಸ್ಟರ್ಗಳ ಹಾವಳಿ ಹಾಗೂ ಭ್ರಷ್ಟಾಚಾರದ ಜಾಲದಲ್ಲಿ ಸಿಲುಕಿಕೊಂಡಿದೆ. ಈ ಕಷ್ಟದಿಂದ ರಾಜ್ಯವನ್ನು ಪಾರುಮಾಡಿ, ಮತ್ತೆ ಪ್ರಗತಿಪರ ಪಂಜಾಬ್ ಆಗಿ ಪರಿವರ್ತಿಸಲು ನಾವೆಲ್ಲರೂ ಚಿಲ್ಲರೆ ರಾಜಕೀಯದಿಂದ ಮೇಲೆದ್ದು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ,” ಎಂದು ಕರೆ ನೀಡಿದ್ದಾರೆ. ರಾಜಕೀಯದಲ್ಲಿದ್ದ ‘ಮೈ-ಬಾಪ್’ (ಮಾಲೀಕತ್ವದ) ಸಂಸ್ಕೃತಿಯನ್ನು ಅಂತ್ಯಗೊಳಿಸಿ, ಜನ ಸಾಮಾನ್ಯರನ್ನೇ ಪ್ರೇರಣೆಯಾಗಿಟ್ಟುಕೊಂಡು ಕೆಲಸ ಮಾಡಿದ್ದು ತಮ್ಮ ಜೀವನದ ದೊಡ್ಡ ಸಾಧನೆ ಎಂದೂ ಅವರು ಹೇಳಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ?
ಕಳೆದ ವರ್ಷ ಜೂನ್ನಲ್ಲಿ ಪಕ್ಷವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಕನ್ವರ್ ವಿಜಯ್ ಪ್ರತಾಪ್ ಅವರನ್ನು ಆಪ್ ಐದು ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಿತ್ತು. ಅಂದಿನಿಂದಲೂ ಅವರು ಭಗವಂತ್ ಮಾನ್ ಸರ್ಕಾರ ಹಾಗೂ ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. 2015ರ ಫರೀದ್ಕೋಟ್ ಪವಿತ್ರ ಗ್ರಂಥ ಅಪಚಾರ ಮತ್ತು ಗುಂಡಿನ ಚಟುವಟಿಕೆಗಳ ತನಿಖೆಯ ವಿಚಾರದಲ್ಲೂ ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದರು. 2021ರಲ್ಲಿ ಐಪಿಎಸ್ ಹುದ್ದೆಗೆ ಸ್ವಯಂನಿವೃತ್ತಿ ನೀಡಿ ಎಎಪಿ ಸೇರಿದ್ದ ಇವರು, ಇದೀಗ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿಗಳು ಬಲವಾಗಿ ಕೇಳಿಬರುತ್ತಿವೆ.
ಆಪ್ನಲ್ಲಿ ಹೆಚ್ಚಿದ ಬಿಕ್ಕಟ್ಟು
ಭಾನುವಾರಷ್ಟೇ ಪಟಿಯಾಲ ಜಿಲ್ಲೆಯ ಸಮಾನಾ ಕ್ಷೇತ್ರದ ಶಾಸಕ ಚೇತನ್ ಸಿಂಗ್ ಜೌರಮಜ್ರಾ ಮತ್ತು ಸನೌರ್ ಕ್ಷೇತ್ರದ ಶಾಸಕ ಹರ್ಮೀತ್ ಸಿಂಗ್ ಪಠಾನ್ಮಜ್ರಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದರ ಬೆನ್ನಲ್ಲೇ ಈಗ ಕನ್ವರ್ ವಿಜಯ್ ಪ್ರತಾಪ್ ಸಿಂಗ್ ಕೂಡ ಶಾಸಕ ಸ್ಥಾನಕ್ಕೆ ಗುಡ್ಬೈ ಹೇಳಿರುವುದು ಪಂಜಾಬ್ ಎಎಪಿಯಲ್ಲಿ ರಾಜಕೀಯ ಸಂಚಲನ ಮೂಡಿಸಿದೆ.



















