ಮುಂಬೈ: ‘ಕಾಂಟೇ’, ‘ಝಿಂದಾ’ ಹಾಗೂ ‘ಶೂಟೌಟ್ ಎಟ್ ಲೋಖಂಡ್‌ವಾಲಾ’ದಂತಹ ಜನಪ್ರಿಯ ಹಿಂದಿ ಸಿನಿಮಾಗಳನ್ನು ನಿರ್ದೇಶಿಸಿದ್ದ ಖ್ಯಾತ ಬಾಲಿವುಡ್ ನಿರ್ದೇಶಕ ಸಂಜಯ್ ಗುಪ್ತಾ (57) ಅವರು ಹಠಾತ್ ನಿಧನರಾಗಿದ್ದಾರೆ. ಅಕ್ಟೋಬರ್ 30ರ ಶುಕ್ರವಾರ ತಮ್ಮ ಮನೆಯ ಅಡುಗೆಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ತಲೆಗೆ ಗಂಭೀರ ಪೆಟ್ಟಾದ ಪರಿಣಾಮ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಗಿದ್ದೇನು?
ಮಧ್ಯಾಹ್ನ ಸುಮಾರು 2.30ರ ಸುಮಾರಿಗೆ ಸಂಜಯ್ ಗುಪ್ತಾ ಅವರು ಅಡುಗೆಮನೆಯಲ್ಲಿ ಆಕಸ್ಮಿಕವಾಗಿ ಬಿದ್ದಿದ್ದಾರೆ. ಘಟನೆ ನಡೆದ ಸಮಯದಲ್ಲಿ ಅವರ ಪತ್ನಿ ಹಾಗೂ ಇಬ್ಬರು ಪುತ್ರರು ಮನೆಯಲ್ಲೇ ಇದ್ದರಾದರೂ, ಆರಂಭದಲ್ಲಿ ಯಾರಿಗೂ ವಿಷಯ ತಿಳಿದಿರಲಿಲ್ಲ. ಈ ಘಟನೆ ಹೇಗೆ ಸಂಭವಿಸಿತು ಎಂಬ ಕುರಿತು ಇನ್ನು ಸ್ಪಷ್ಟ ವಿವರಗಳು ತಿಳಿದುಬಂದಿಲ್ಲ.
ಸಂಜಯ್ ದತ್ ಜೊತೆಗಿನ ಯಶಸ್ವಿ ಜೋಡಿ
ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಸಂಜಯ್ ಗುಪ್ತಾ ಅವರು ಹಿಂದಿ ಸಿನಿಮಾಗಳಲ್ಲಿ ತಮ್ಮದೇ ಆದ ವಿಶಿಷ್ಟ ಆಕ್ಷನ್ ಹಾಗೂ ಕ್ರೈಮ್ ಥ್ರಿಲ್ಲರ್ ಶೈಲಿಗೆ ಹೆಸರಾಗಿದ್ದರು. ವಿಶೇಷವಾಗಿ ನಟ ಸಂಜಯ್ ದತ್ ಅವರೊಂದಿಗೆ ಇವರ ಜೋಡಿ ಬಾಲಿವುಡ್‌ನಲ್ಲಿ ಭಾರೀ ಯಶಸ್ಸು ಕಂಡಿತ್ತು. ‘ಕಾಂಟೇ’ (2002), ‘ಮುಸಾಫಿರ್’ (2004), ‘ಝಿಂದಾ’ (2006) ಮತ್ತು ‘ಶೂಟೌಟ್ ಎಟ್ ಲೋಖಂಡ್‌ವಾಲಾ’ (2007) ಸೂಪರ್ ಹಿಟ್ ಸಿನಿಮಾಗಳನ್ನು ಇವರು ನಿರ್ದೇಶಿಸಿದ್ದರು. 1991ರ ಲೋಖಂಡ್‌ವಾಲಾ ಎನ್‌ಕೌಂಟರ್ ಆಧಾರಿತ ಚಿತ್ರಕ್ಕೆ ಇವರು ನಿರ್ದೇಶನ, ನಿರ್ಮಾಣ ಹಾಗೂ ಸಹ-ಲೇಖಕರಾಗಿ ಕೆಲಸ ಮಾಡಿದ್ದರು. ನಂತರ ನೈಜ ಘಟನೆ ಆಧಾರಿತ ‘ಶೂಟೌಟ್ ಎಟ್ ವಡಾಲ’ (2013) ಚಿತ್ರವನ್ನೂ ನಿರ್ದೇಶಿಸಿದ್ದರು.
ವೈವಿಧ್ಯಮಯ ಸಿನಿಮಾಗಳ ಕೊಡುಗೆ
ಸಂಜಯ್ ಗುಪ್ತಾ ಅವರು ಕೇವಲ ಕ್ರೈಮ್ ಸಿನಿಮಾಗಳಿಗಷ್ಟೇ ಸೀಮಿತವಾಗಿರಲಿಲ್ಲ. ಐಶ್ವರ್ಯಾ ರೈ ಬಚ್ಚನ್ ಅಭಿನಯದ ‘ಜಜ್ಬಾ’ (2015), ಹೃತಿಕ್ ರೋಷನ್ ಅಭಿನಯದ ‘ಕಾಬಿಲ್’ (2017) ಮುಂತಾದ ಭಿನ್ನ ಸನ್ನಿವೇಶದ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ಜೊತೆಗೆ ‘ದಸ್ ಕಹಾನಿಯಾ’ (2007), ‘ಆ್ಯಸಿಡ್ ಫ್ಯಾಕ್ಟರಿ’ (2009) ಹಾಗೂ ಜಾನ್ ಅಬ್ರಹಾಂ-ಇಮ್ರಾನ್ ಹಶ್ಮಿ ಅಭಿನಯದ ‘ಮುಂಬೈ ಸಾಗಾ’ (2021) ಚಿತ್ರಗಳೂ ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದವು.
ಚಿತ್ರರಂಗಕ್ಕೆ ಬರುವ ಮುನ್ನ ಪೋಸ್ಟ್-ಪ್ರೊಡಕ್ಷನ್ ಹಾಗೂ ಸೌಂಡ್ ಡಿಸೈನಿಂಗ್ ವಿಭಾಗದಲ್ಲಿ ಕೆಲಸ ಮಾಡಿದ್ದ ಇವರು, ಪಂಕಜ್ ಪರಾಶರ್ ಅವರ ಬಳಿ ‘ಕರಮ್‌ಚಂದ್’ ಧಾರಾವಾಹಿ ಹಾಗೂ ‘ಜಲ್ವಾ’ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು. 2001ರಲ್ಲಿ ತಮ್ಮದೇ ‘ವೈಟ್ ಫೆದರ್ ಫಿಲ್ಮ್ಸ್’ ಸಂಸ್ಥೆಯನ್ನು ಸ್ಥಾಪಿಸಿ ಯಶಸ್ವಿ ನಿರ್ಮಾಪಕರಾಗಿಯೂ ಹೊರಹೊಮ್ಮಿದ್ದರು. ಇತ್ತೀಚೆಗೆ ಇವರ ನಿರ್ಮಾಣದಲ್ಲಿ ‘ದಿ ಮಿರಾಂಡಾ ಬ್ರದರ್ಸ್’ ಮತ್ತು ‘ವಿಸ್ಫೋಟ್’ (2024) ಸಿನಿಮಾಗಳು ತೆರೆಕಂಡಿದ್ದವು.
ಸ್ಟೈಲಿಶ್ ಆಕ್ಷನ್ ದೃಶ್ಯಗಳು, ಭೂಗತ ಲೋಕದ ಕಥಾಹಂದರ ಹಾಗೂ ನಗರ ಜೀವನದ ಹಿನ್ನೆಲೆಯ ಚಲನಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಂಜಯ್ ಗುಪ್ತಾ ಅವರ ಅಗಲಿಕೆಗೆ ಬಾಲಿವುಡ್ ತೀವ್ರ ಕಂಬನಿ ಮಿಡಿದಿದೆ.

















