ಲೂಧಿಯಾನ: ಪಂಜಾಬ್ನ ಲೂಧಿಯಾನದಲ್ಲಿ ಹಾಡಹಗಲೇ ಮತ್ತೊಂದು ಕುಕೃತ್ಯ ನಡೆದಿದ್ದು, ಪಂಜಾಬ್ ಯುವ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಜಗ್ಜೋತ್ ಸಿಂಗ್ ಮೇಲೆ ಶಸ್ತ್ರಧಾರಿ ದುಷ್ಕರ್ಮಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿ, ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಇಲ್ಲಿನ ಧೋಲೆವಾಲ್ ಪ್ರದೇಶದಲ್ಲಿ ನಡೆದಿದೆ. ದಾಳಿಯ ಸಮಯದಲ್ಲಿ ಜಗ್ಜೋತ್ ಅವರ ಕಾರಿನಲ್ಲಿ ಅವರ ತಾಯಿ ಹಾಗೂ ಮೂರು ವರ್ಷದ ಮಗು ಕೂಡ ಇತ್ತು.
ಕುಟುಂಬದ ಮೂಲಗಳ ಪ್ರಕಾರ, ಜಗ್ಜೋತ್ ಸಿಂಗ್ ತಮ್ಮ ತಾಯಿ ಮಂಜೀತ್ ಕೌರ್ ಹಾಗೂ ಮೂರು ವರ್ಷದ ಮಗನೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಊಟ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದರು. ದಾರಿಯಲ್ಲಿ ನೀರಿನ ಬಾಟಲಿ ಖರೀದಿಸಲು ಜಗ್ಜೋತ್ ಕಾರಿನಿಂದ ಕೆಳಗಿಳಿದಾಗ, ಸುಮಾರು ಎಂಟಕ್ಕೂ ಹೆಚ್ಚು ಜನರಿದ್ದ ದುಷ್ಕರ್ಮಿಗಳ ಗುಂಪು ಏಕಾಏಕಿ ಅವರ ಮೇಲೆ ಐದರಿಂದ ಆರು ಸುತ್ತು ಗುಂಡು ಹಾರಿಸಿದೆ. ಆ ಬಳಿಕ ಅವರು ಜೀವಭಯದಿಂದ ಕಾರಿನೊಳಗೆ ಹತ್ತಲು ಯತ್ನಿಸಿದಾಗ, ದುಷ್ಕರ್ಮಿಗಳು ಓಡಿ ಬಂದು ಅವರ ತಲೆಗೆ ಕೊಡಲಿಯಿಂದ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ.
ರಕ್ತಸ್ರಾವದ ನಡುವೆಯೂ ಆಸ್ಪತ್ರೆಗೆ ಕಾರು ಚಲಾಯಿಸಿದ ಜಗ್ಜೋತ್
ತೀವ್ರ ರಕ್ತಸ್ರಾವ ಮತ್ತು ಗಂಭೀರ ಗಾಯಗಳ ಹೊರತಾಗಿಯೂ ಜಗ್ಜೋತ್ ಸಿಂಗ್ ಚಾಣಾಕ್ಷತನದಿಂದ ದುಷ್ಕರ್ಮಿಗಳ ಕೈಯಿಂದ ತಪ್ಪಿಸಿಕೊಂಡು, ತಾನೇ ಕಾರನ್ನು ಚಲಾಯಿಸಿಕೊಂಡು ಸಮೀಪದ ಆಸ್ಪತ್ರೆಗೆ ತಲುಪಿದ್ದಾರೆ. ವೈದ್ಯರು ತಕ್ಷಣವೇ ಅವರಿಗೆ ತುರ್ತು ಚಿಕಿತ್ಸೆ ಒದಗಿಸಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗ್ಜೋತ್, ಒಂದು ವರ್ಷದ ಹಿಂದೆ ಕೂಡ ಇದೇ ಗುಂಪು ತಮ್ಮ ಮನೆಗೆ ಗುಂಡಿನ ದಾಳಿ ನಡೆಸಿತ್ತು ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಕಾಂಗ್ರೆಸ್ ತೊರೆದು ಎನ್ಜಿಒ ಮತ್ತು ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಅವರು, ಈ ದಾಳಿಯ ಹಿಂದೆ ರಾಜಕೀಯ ದ್ವೇಷವಿರಬಹುದು ಎಂದು ಶಂಕಿಸಿದ್ದಾರೆ.
ಆಪ್ ಸರ್ಕಾರದ ವಿರುದ್ಧ ಹೆಚ್ಚಿದ ಆಕ್ರೋಶ
ಘಟನೆಯ ಕುರಿತು ದೂರು ದಾಖಲಿಸಿಕೊಂಡಿರುವ ಲೂಧಿಯಾನ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪಂಜಾಬ್ನಲ್ಲಿ ಡ್ರಗ್ಸ್ ಹಾವಳಿ ಹಾಗೂ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ ಎಂದು ಆಡಳಿತಾರೂಢ ಆಪ್ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈ ಭೀಕರ ಘಟನೆ ನಡೆದಿರುವುದು ಸಾರ್ವಜನಿಕರಲ್ಲಿ ಭಾರೀ ಆತಂಕ ಮೂಡಿಸಿದೆ.



















