ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್ಪ್ರೆಸ್ವೇಯಲ್ಲಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ಕಾಂಗ್ರೆಸ್ ಸಂಸದ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ಪಡೆಯ (ಕಾನ್ವಾಯ್) ಐದು ವಾಹನಗಳು ಆ್ಯಂಬುಲೆನ್ಸ್ ಒಂದಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿವೆ. ರಾಜ್ಯ ರಾಜಧಾನಿ ಲಕ್ನೋದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಹಾಲಿಯಾಪುರ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ರಾಹುಲ್ ಗಾಂಧಿ ಅವರ ಕಾರಿಗೆ ಏನೂ ಆಗಿಲ್ಲ. ಅವರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಅಪಘಾತ ಸಂಭವಿಸಿದ್ದು ಹೇಗೆ?
ರಾಹುಲ್ ಗಾಂಧಿ ಅವರು ಇಂದು ಬೆಳಿಗ್ಗೆ ಲಕ್ನೋ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಸುಲ್ತಾನ್ಪುರಕ್ಕೆ ತೆರಳುತ್ತಿದ್ದರು. ಗಮ್ಯಸ್ಥಾನ ತಲುಪಲು ಇನ್ನು ಕೇವಲ 35 ಕಿಲೋಮೀಟರ್ ಬಾಕಿ ಇರುವಾಗ ಬೆಂಗಾವಲು ಪಡೆಯ ಹಿಂಭಾಗದಲ್ಲಿದ್ದ ವಾಹನಗಳ ನಡುವೆ ಈ ಸರಣಿ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಎಕ್ಸ್ಪ್ರೆಸ್ವೇಯ ವೇಗದ ಪಥದಲ್ಲಿದ್ದ (ಫಾಸ್ಟ್ ಲೇನ್) ಆ್ಯಂಬುಲೆನ್ಸ್ಗೆ ಬೆಂಗಾವಲು ಪಡೆಯಲ್ಲಿದ್ದ ಸ್ಕಾರ್ಪಿಯೋ ಕಾರು ಸೇರಿದಂತೆ ಐದು ವಾಹನಗಳು ಡಿಕ್ಕಿಯಾಗಿವೆ. ಘಟನೆಯ ತೀವ್ರತೆಗೆ ಸ್ಕಾರ್ಪಿಯೋ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ, ಆ್ಯಂಬುಲೆನ್ಸ್ನ ಮುಂಭಾಗದಲ್ಲಿ ನಿಂತಿರುವುದು ಕಂಡುಬಂದಿದೆ.
ಸುಲ್ತಾನ್ಪುರ ಕೋರ್ಟ್ಗೆ ತೆರಳುತ್ತಿದ್ದ ರಾಹುಲ್ ಗಾಂಧಿ
2018ರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗಾಗಿ ರಾಹುಲ್ ಗಾಂಧಿ ಅವರು ಸುಲ್ತಾನ್ಪುರದ ವಿಶೇಷ ಸಂಸದ-ಶಾಸಕರ (MP-MLA) ನ್ಯಾಯಾಲಯಕ್ಕೆ ತೆರಳುತ್ತಿದ್ದರು. ಈ ಪ್ರಕರಣದಲ್ಲಿ ಇಂದು ನ್ಯಾಯಾಲಯವು ತೀರ್ಪು ಪ್ರಕಟಿಸುವ ನಿರೀಕ್ಷೆಯಿದ್ದು, ಅದಕ್ಕಾಗಿ ರಾಹುಲ್ ಗಾಂಧಿ ಅವರ ನೇರ ಉಪಸ್ಥಿತಿ ಅಗತ್ಯವಾಗಿತ್ತು.
2018ರ ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಅವರು ಈ ಹೇಳಿಕೆ ನೀಡಿದ್ದರು ಎನ್ನಲಾಗಿದ್ದು, ಸುಲ್ತಾನ್ಪುರ ಜಿಲ್ಲಾ ಸಹಕಾರಿ ಬ್ಯಾಂಕ್ನ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ವಿಜಯ್ ಮಿಶ್ರಾ ಎಂಬವರು ಈ ದೂರು ದಾಖಲಿಸಿದ್ದರು. ಪ್ರಸ್ತುತ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



















