ಬೆಂಗಳೂರು: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸುರಕ್ಷಿತ ಚಾಲನಾ ಟ್ಯುಟೋರಿಯಲ್ ಮೌಲ್ಯಮಾಪನದಲ್ಲಿ ತೇರ್ಗಡೆಯಾಗಲು ಕನಿಷ್ಠ ಅಂಕಗಳ ಮಿತಿಯನ್ನು ಶೇ.60ರಿಂದ ಶೇ.75ಕ್ಕೆ ಹೆಚ್ಚಿಸಲು ಪ್ರಸ್ತಾಪ ಸಿದ್ಧಪಡಿಸಿದೆ. ಇದರೊಂದಿಗೆ, ಆಧಾರ್ ದೃಢೀಕರಣದ ಮೂಲಕ ಪೂರ್ಣಗೊಳಿಸುವ ಕೆಲವು ಆನ್ ಲೈನ್ ಚಾಲನಾ ಪರವಾನಗಿ ಸೇವೆಗಳಿಗೆ ಶುಲ್ಕ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ಅಂದರೆ, ಲರ್ನರ್ಸ್ ಲೈಸೆನ್ಸ್ ನೀಡುವ ಮೊದಲು ನಡೆಸುವ ಆನ್ ಲೈನ್ ಪರೀಕ್ಷೆಯಲ್ಲಿ ಇದುವರೆಗೆ ಶೇ.60ರಷ್ಟು ಅಂಕ ಪಡೆಯಬೇಕು. ಹೊಸ ನಿಯಮ ಜಾರಿಗೆ ಬಂದರೆ ಶೇ.75ರಷ್ಟು ಅಂಕ ಪಡೆಯುವುದು ಕಡ್ಡಾಯವಾಗುತ್ತದೆ.
ಚಾಲನಾ ಪರವಾನಗಿ ನಿಯಮಗಳಲ್ಲಿ ಮಾಡಲಾಗಿರುವ ಈ ಪ್ರಸ್ತಾವಿತ ಬದಲಾವಣೆಗಳು ಚಾಲನಾ ಮೌಲ್ಯಮಾಪನ ಪ್ರಕ್ರಿಯೆಯನ್ನು ಇನ್ನಷ್ಟು ಬಿಗಿಗೊಳಿಸುವ ಉದ್ದೇಶವನ್ನು ಹೊಂದಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಮೋಟಾರು ವಾಹನಗಳ ನಿಯಮಗಳ ಕರಡು ತಿದ್ದುಪಡಿಯಲ್ಲಿ, ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸುರಕ್ಷಿತ ಚಾಲನಾ ಟ್ಯುಟೋರಿಯಲ್ ಕನಿಷ್ಠ 30 ನಿಮಿಷಗಳ ಕಾಲ ಇರಬೇಕು ಎಂದು ಪ್ರಸ್ತಾಪಿಸಿದೆ.
ಈ ಪ್ರಸ್ತಾಪದ ಪ್ರಕಾರ, ಚಾಲನಾ ಪರವಾನಗಿಯಲ್ಲಿ ಹೆಸರು ಮತ್ತು ವಿಳಾಸ ಸೇರಿದಂತೆ ಯಾವುದೇ ವಿವರಗಳನ್ನು ಬದಲಾಯಿಸಲು ಸಲ್ಲಿಸುವ ಅರ್ಜಿಗಳನ್ನು ಪರವಾನಗಿ ಪ್ರಾಧಿಕಾರಗಳು 15 ದಿನಗಳ ಒಳಗೆ ಅಂಗೀಕರಿಸಬೇಕು ಅಥವಾ ತಿರಸ್ಕರಿಸಬೇಕು. ಒಂದು ವೇಳೆ ಅರ್ಜಿಯನ್ನು ತಿರಸ್ಕರಿಸಿದರೆ ಅದಕ್ಕೆ ಸೂಕ್ತ ಕಾರಣವನ್ನು ನೀಡಬೇಕಾಗುತ್ತದೆ. ಅಲ್ಲದೆ, ಅರ್ಜಿದಾರರ ಹೆಸರು ಮತ್ತು ವಿಳಾಸದಂತಹ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದುಗೊಳಿಸಲು ಸಹ ಪ್ರಸ್ತಾಪಿಸಲಾಗಿದೆ.
ಈ ಕರಡು ನಿಯಮಗಳಲ್ಲಿ ಅರ್ಜಿದಾರರು ತಮ್ಮ ಗುರುತು, ವಯಸ್ಸು ಮತ್ತು ವಾಸಸ್ಥಳದ ಸಾಕ್ಷಿಯಾಗಿ ಸಲ್ಲಿಸಬಹುದಾದ ದಾಖಲೆಗಳ ಪಟ್ಟಿಯನ್ನು ನಿರ್ದಿಷ್ಟಪಡಿಸಲಾಗಿದೆ. ಈ ಪಟ್ಟಿಯಲ್ಲಿ ಆಧಾರ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಇ-ರೇಷನ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳು ಸೇರಿವೆ. ಸಚಿವಾಲಯವು ಈ ಕರಡು ಅಧಿಸೂಚನೆಯನ್ನು ಪ್ರಕಟಿಸಿದ 30 ದಿನಗಳ ಒಳಗೆ ಸಂಬಂಧಪಟ್ಟವರಿಂದ ಮತ್ತು ಸಾರ್ವಜನಿಕರಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಆಹ್ವಾನಿಸಿದೆ.



















