ಮುಂಬಯಿ: ಆಸ್ಟ್ರೇಲಿಯಾ ವಿರುದ್ಧ ಗೆಬರ್ಹಾದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ತೋರಿದ ಅಸಾಧಾರಣ ಆಟಕ್ಕೆ ಕ್ರಿಕೆಟ್ ಜಗತ್ತು ಬೆರಗಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಏಕಾಂಗಿಯಾಗಿ ಪಂದ್ಯದ ಗತಿಯನ್ನು ಬದಲಿಸಿದ ಜಾನ್ಸೆನ್ ಅವರ ಈ ಮ್ಯಾಚ್-ವಿನ್ನಿಂಗ್ ಪ್ರದರ್ಶನವನ್ನು ದಕ್ಷಿಣ ಆಫ್ರಿಕಾದ ದಂತಕಥೆ, ಮಾಜಿ ವೇಗದ ಬೌಲರ್ ಡೇಲ್ ಸ್ಟೇನ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಜಾನ್ಸೆನ್ ಆಟಕ್ಕೆ ಮಾರುಹೋಗಿರುವ ಸ್ಟೇನ್, ಸಾಮಾಜಿಕ ಜಾಲತಾಣದಲ್ಲಿ “ಮಾರ್ಕೊ ಜಾನ್ಸೆನ್ ಪ್ರಸ್ತುತ ವಿಶ್ವದ ಶ್ರೇಷ್ಠ ಕ್ರಿಕೆಟಿಗ” ಎಂದು ಘೋಷಿಸುವ ಮೂಲಕ ಈ ಯುವ ಪ್ರತಿಭೆಯ ಸಾಮರ್ಥ್ಯಕ್ಕೆ ಅತಿ ದೊಡ್ಡ ಪ್ರಮಾಣಪತ್ರ ನೀಡಿದ್ದಾರೆ. ಸ್ಟೇನ್ ಅವರಂತಹ ಶ್ರೇಷ್ಠ ವೇಗಿಯಿಂದ ಇಂತಹದೊಂದು ಮೆಚ್ಚುಗೆಯ ನುಡಿ ಹೊರಬಿದ್ದಿರುವುದು ಜಾನ್ಸೆನ್ ಅವರ ಈ ಐತಿಹಾಸಿಕ ಪ್ರದರ್ಶನದ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಸಂಕಷ್ಟದಲ್ಲಿ ಆಸರೆಯಾದ ಜಾನ್ಸೆನ್-ಬವುಮಾ ಜೊತೆಯಾಟ
ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ 110 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಆಸ್ಟ್ರೇಲಿಯಾದ ಬೌಲರ್‌ಗಳು ಸಂಪೂರ್ಣ ಪಾರುಪತ್ಯ ಮೆರೆದಿದ್ದರು. ಈ ಸಂದರ್ಭದಲ್ಲಿ ನಾಯಕ ತೆಂಬಾ ಬವುಮಾ ಅವರೊಂದಿಗೆ ಕ್ರೀಸ್‌ಗೆ ಇಳಿದ ಮಾರ್ಕೊ ಜಾನ್ಸೆನ್, ಆಸೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದರು.
ಎಡಗೈ ಬ್ಯಾಟರ್ ಆಗಿರುವ ಜಾನ್ಸೆನ್, ಕೇವಲ 100 ಎಸೆತಗಳಲ್ಲಿ 9 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 85 ರನ್‌ಗಳ ಆಕ್ರಮಣಕಾರಿ ಹಾಗೂ ಅಮೂಲ್ಯವಾದ ಇನ್ನಿಂಗ್ಸ್ ಕಟ್ಟಿದರು. ಬವುಮಾ ಜೊತೆಗೂಡಿ 7ನೇ ವಿಕೆಟ್‌ಗೆ 132 ರನ್‌ಗಳ ದಾಖಲೆಯ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಸೇಂಟ್ ಜಾರ್ಜ್ ಪಾರ್ಕ್ ಮೈದಾನದಲ್ಲಿ 1896ರ ನಂತರ 7ನೇ ವಿಕೆಟ್‌ಗೆ ದಕ್ಷಿಣ ಆಫ್ರಿಕಾ ಪರ ದಾಖಲಾದ ಅತಿ ದೊಡ್ಡ ಜೊತೆಯಾಟ ಇದಾಗಿದೆ. ನಾಯಕ ತೆಂಬಾ ಬವುಮಾ ಅವರ ಅದ್ಭುತ 179 ರನ್ ಹಾಗೂ ಸೈಮನ್ ಹಾರ್ಮರ್ ಅವರ 82 ರನ್‌ಗಳ ಕೊಡುಗೆಯಿಂದಾಗಿ ದಕ್ಷಿಣ ಆಫ್ರಿಕಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 425 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು.
ಬೌಲಿಂಗ್‌ನಲ್ಲೂ ಜಾನ್ಸೆನ್ ‘ಪಂಚ’ಮಿ
ಬ್ಯಾಟಿಂಗ್‌ನಲ್ಲಿ ಆಸರೆಯಾದ ಜಾನ್ಸೆನ್, ಬೌಲಿಂಗ್‌ನಲ್ಲೂ ಆಸ್ಟ್ರೇಲಿಯಾ ಬ್ಯಾಟರ್‌ಗಳನ್ನು ಕಾಡಿದರು. ಆಸೀಸ್ ಬ್ಯಾಟಿಂಗ್ ಪಡೆಯನ್ನು ಅಕ್ಷರಶಃ ಧೂಳೀಪಟ ಮಾಡಿದ ಜಾನ್ಸೆನ್ ಕೇವಲ 33 ರನ್ ನೀಡಿ 5 ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು. ಟ್ರಾವಿಸ್ ಹೆಡ್, ಸ್ಕಾಟ್ ಬೋಲ್ಯಾಂಡ್, ಮ್ಯಾಟ್ ರೆನ್ಶಾ, ಅಲೆಕ್ಸ್ ಕ್ಯಾರಿ ಹಾಗೂ ಬ್ಯೂ ವೆಬ್‌ಸ್ಟರ್ ಅವರಂತಹ ಅಪಾಯಕಾರಿ ಆಟಗಾರರನ್ನು ಪೆವಿಲಿಯನ್‌ಗಟ್ಟಿ ಆಸ್ಟ್ರೇಲಿಯಾದ ಬೆನ್ನೆಲುಬು ಮುರಿದರು. ಜಾನ್ಸೆನ್ ಅವರ ಈ ಮಾರಕ ದಾಳಿಗೆ ನಲುಗಿದ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 99 ರನ್‌ಗಳಿಗೆ ಆಲೌಟ್ ಆಗಿ ತೀವ್ರ ಮುಖಭಂಗ ಅನುಭವಿಸಿತು. ಬೃಹತ್ ಮುನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬವುಮಾ, ಆಸ್ಟ್ರೇಲಿಯಾ ಮೇಲೆ ಫಾಲೋ-ಆನ್ ಹೇರಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ಈವರೆಗೆ ಫಾಲೋ-ಆನ್ ಹೇರಲ್ಪಟ್ಟ 40 ಪಂದ್ಯಗಳಲ್ಲಿ 29ರಲ್ಲಿ ಸೋತು, 11 ಪಂದ್ಯಗಳನ್ನು ಮಾತ್ರ ಡ್ರಾ ಮಾಡಿಕೊಂಡಿದೆ. ಇದೀಗ ಗೆಬರ್ಹಾ ಟೆಸ್ಟ್‌ನಲ್ಲೂ ಆಸ್ಟ್ರೇಲಿಯಾ ಸೋಲಿನ ಸುಳಿಗೆ ಸಿಲುಕಿದ್ದು, ಮಾರ್ಕೊ ಜಾನ್ಸೆನ್ ಅವರ ಈ ಆಲ್‌ರೌಂಡ್ ಆಟ ಅವರಿಗೆ ‘ಪಂದ್ಯ ಶ್ರೇಷ್ಠ’ ಪ್ರಶಸ್ತಿಯನ್ನು ತಂದುಕೊಡುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ.
ಇದನ್ನೂ ಓದಿ:ಭಾರತದಲ್ಲಿ ನಡೆಯಲಿರುವ ಮಾಸ್ಟರ್ಸ್ ವಿಶ್ವಕಪ್: ಪಾಕ್ ಓವರ್-50 ಕ್ರಿಕೆಟ್ ತಂಡಕ್ಕೆ ಅನುಮತಿ ನಿರಾಕರಿಸಿದ PCB



















