ಕಲಬುರ್ಗಿಯಲ್ಲಿ ಉಗ್ರಗಾಮಿಗಳ ಜೊತೆ ನಂಟು ಹೊಂದಿದ ಆರೋಪದಡಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಮತ್ತು ರಾಜ್ಯ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಪ್ರಕ್ರಿಯೆ ಕೈಗೊಂಡಿವೆ. ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಕಲಬುರ್ಗಿಯಲ್ಲಿ ಮಾಹಿತಿ ನೀಡಿದ್ದಾರೆ.
ಉಗ್ರಗಾಮಿಗಳ ಜೊತೆ ನಂಟು ಹೊಂದಿರುವ ಮಾಹಿತಿ ಆಧಾರದ ಮೇಲೆ ಮೊದಲು ಇಬ್ಬರನ್ನು ವಶಕ್ಕೆ ಪಡೆಯಲಾಗಿತ್ತು. ವಿಚಾರಣೆಯ ನಂತರ ಒಬ್ಬ ಮಾತ್ರ ಉಗ್ರರೊಂದಿಗೆ ಸಂಪೂರ್ಣ ಟಚ್ನಲ್ಲಿ ಇರುವುದು ದೃಢಪಟ್ಟಿದೆ. ಬಂಧಿತ ವ್ಯಕ್ತಿ ಪಶ್ಚಿಮ ಬಂಗಾಳ ಮೂಲದವನು ಎಂದು ತಿಳಿದು ಬಂದಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಭಾರತ ಸರ್ಕಾರದ ಕೋ-ಆರ್ಡಿನೇಷನ್ನೊಂದಿಗೆ ತನಿಖೆ ನಡೆಸಲಾಗುತ್ತಿದೆ.
ಹೊರ ರಾಜ್ಯದವರು ಬಹಳಷ್ಟು ಜನ ಇಲ್ಲಿಗೆ ಉದ್ಯೋಗಕ್ಕೆ ಆಗಮಿಸುತ್ತಿದ್ದಾರೆ. ಅದು ಅವರ ಹಕ್ಕಾಗಿದ್ದು, ತಡೆಯಲು ಆಗುವುದಿಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಬೇರೆ ರಾಜ್ಯಗಳವರ ಬಗ್ಗೆ ಮಾಹಿತಿ ಕೊಡುವಂತೆ ಹೇಳಿದ್ದರೂ ಯಾರೂ ಕೊಟ್ಟಿಲ್ಲ. ಹಬ್ಬದ ನಂತರ ಉದ್ಯಮಿಗಳು, ಇ-ಕಾಮರ್ಸ್, ಕಾಫಿ ಅಸೋಸಿಯೇಷನ್ ಮತ್ತು ಹೋಂ ಸ್ಟೇ ಸೇರಿದಂತೆ ಎಲ್ಲರನ್ನೂ ಕರೆಸಿ ಅವರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸೆಸ್ ಏನು ಎನ್ನುವ ಮಾಹಿತಿ ಪಡೆಯಲಾಗುವುದು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


















