ಬೆಂಗಳೂರು: ಸಾಮಾನ್ಯವಾಗಿ ಅತ್ಯಂತ ಹಳೆಯ ಕ್ರೆಡಿಟ್ ಕಾರ್ಡ್ ಅನ್ನೇ ಬಳಸುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ. ಏಕೆಂದರೆ ಇದು ನಿಮ್ಮ ಸಾಲದ ಇತಿಹಾಸವನ್ನು (Credit History) ವಿಸ್ತರಿಸಿ, ಸಿಬಿಲ್ ಅಥವಾ ಕ್ರೆಡಿಟ್ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಪ್ರತಿಯೊಂದು ಸಂದರ್ಭದಲ್ಲೂ ಹಳೆಯ ಕಾರ್ಡ್ ಅನ್ನು ಇಟ್ಟುಕೊಳ್ಳುವುದು ಜಾಣತನವಲ್ಲ ಎಂಬ ಅಭಿಪ್ರಾಯವೂ ಇದೆ. ಹಾಗಾಗಿ, ಕ್ರೆಡಿಟ್ ಕಾರ್ಡ್ ಕ್ಲೋಸ್ ಮಾಡುವ ಮುನ್ನ ಕೆಲ ಸಂಗತಿಗಳನ್ನು ತಿಳಿದುಕೊಳ್ಳುವುದು ಉತ್ತಮ.
ಹಳೆಯ ಕ್ರೆಡಿಟ್ ಕಾರ್ಡ್ ಯಾವಾಗ ಕ್ಲೋಸ್ ಮಾಡಬಹುದು?
ಹೆಚ್ಚಿನ ವಾರ್ಷಿಕ ಶುಲ್ಕ: ನಿಮ್ಮ ಹಳೆಯ ಕಾರ್ಡ್ಗೆ ಭಾರಿ ವಾರ್ಷಿಕ ಶುಲ್ಕವಿದ್ದು, ಅದರಿಂದ ಸಿಗುವ ರಿವಾರ್ಡ್ ಗಳು ಅಥವಾ ಏರ್ ಪೋರ್ಟ್ ಲಾಂಜ್ ಆ್ಯಕ್ಸೆಸ್ ನಂತಹ ಸೌಲಭ್ಯಗಳನ್ನು ನೀವು ಬಳಸಿಕೊಳ್ಳದಿದ್ದರೆ, ಅಂತಹ ಕಾರ್ಡ್ ಅನ್ನು ಹೊಂದಿರುವುದು ನಷ್ಟ ಉಂಟುಮಾಡುತ್ತದೆ.
ಸೌಲಭ್ಯಗಳ ಕೊರತೆ: ಕಾರ್ಡ್ ನಲ್ಲಿ ನಿರೀಕ್ಷಿತ ಆಫರ್ ಗಳು ಅಥವಾ ಸೌಲಭ್ಯಗಳು ಇಲ್ಲದಿದ್ದರೆ ಮತ್ತು ಅದು ಲೈಫ್ ಟೈಮ್ ಫ್ರೀ ಅಲ್ಲದಿದ್ದರೆ, ಅದನ್ನು ರದ್ದುಗೊಳಿಸುವುದು ಸೂಕ್ತ.
ನಿರ್ವಹಣೆಯ ತೊಂದರೆ: ಜಾಸ್ತಿ ಬಳಸದ ಕಾರ್ಡ್ ಗಳನ್ನು ನಿರ್ವಹಿಸುವುದು ಮತ್ತು ಅವುಗಳ ಸುರಕ್ಷತೆಯನ್ನು ಕಾಯ್ದುಕೊಳ್ಳುವುದು ಕಷ್ಟವಾಗಿದ್ದರೆ ಮುಚ್ಚುವುದು ಒಳ್ಳೆಯದು.
ಕಾರ್ಡ್ ಕ್ಲೋಸ್ ಮುನ್ನ ನೆನಪಿಡಬೇಕಾದ ಸಂಗತಿಗಳು
- ಬಾಕಿ ಹಣ ಪಾವತಿಸಿ: ಕಾರ್ಡ್ ಬಂದ್ ಮಾಡುವ ಮೊದಲು ಎಲ್ಲ ರೀತಿಯ ಸಾಲ, ಬಾಕಿ ಹಣ ಮತ್ತು ಇಎಂಐಗಳನ್ನು ಸಂಪೂರ್ಣವಾಗಿ ಪಾವತಿಸಿರಬೇಕು.
- ಆರ್ ಬಿಐ ನಿಯಮ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಪ್ರಕಾರ, ಬಾಕಿ ಪಾವತಿಸಿದ ನಂತರ ಗ್ರಾಹಕರು ವಿನಂತಿ ಸಲ್ಲಿಸಿದ 7 ಕೆಲಸದ ದಿನಗಳಲ್ಲಿ ಬ್ಯಾಂಕ್ ಗಳು ಕಾರ್ಡ್ ಕ್ಲೋಸ್ ಮಾಡಬೇಕು.
- ಲಿಖಿತ ದೃಢೀಕರಣ: ಕಾರ್ಡ್ ಕ್ಲೋಸ್ ಮಾಡಿದ ನಂತರ ಬ್ಯಾಂಕ್ ನಿಂದ ಅಧಿಕೃತ ದೃಢೀಕರಣ ಪತ್ರವನ್ನು ಪಡೆದುಕೊಂಡು ಇಟ್ಟುಕೊಳ್ಳಬೇಕು.



















