ಬೆಂಗಳೂರು: ರಾತ್ರಿ ವೇಳೆ ಏಕಾಏಕಿ ಸಲೂನ್ಗೆ ನುಗ್ಗಿ ತಾವು ಮೀಡಿಯಾ ಹಾಗೂ ಸಂಘಟನೆಯವರು ಎಂದು ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಜನರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮಿ, ಮಮತ, ಪ್ರಿಯಾ, ಸಗಾಯ್ ಮೇರಿ, ಯೋಗಬಾಲು ಮತ್ತು ಆಸೀಫ್ ಬಂಧಿತ ಆರೋಪಿಗಳು. ಇವರು ಯೂಟ್ಯೂಬ್ ಚಾನೆಲ್ ಐಡಿ ಹಾಗೂ ಕ್ಯಾಮರಾ ತೋರಿಸಿ, ನೀವು ಅಕ್ರಮ ಚಟುವಟಿಕೆ ಮಾಡುತ್ತಿದ್ದೀರಾ ಎಂದು ಗಲಾಟೆ ಮಾಡಿದ್ದರು. ಅಲ್ಲದೆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಸ್ಥಳದಲ್ಲೇ 1 ಲಕ್ಷ ರೂ. ಪಡೆದುಕೊಂಡು, ಉಳಿದ 4 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದರು. ಘಟನೆ ಬಳಿಕ ಸಲೂನ್ನವರು ನೀಡಿದ ದೂರಿನ ಅನ್ವಯ ಪೊಲೀಸರು ಆರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 80 ಸಾವಿರ ರೂ. ನಗದು, ಒಂದು ಕಾರು, ಒಂದು ಬೈಕ್, 7 ಮೊಬೈಲ್ ಹಾಗೂ ಐಡಿ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.



















