ಬೆಂಗಳೂರು: ಸಾಮಾನ್ಯವಾಗಿ ರಾಜಮನೆತನದ ಮೆರವಣಿಗೆಗಳು ಹಾಗೂ ರಾಷ್ಟ್ರೀಯ ಪ್ರಮುಖ ಆಚರಣೆಗಳಿಗೆ ಸಾಕ್ಷಿಯಾಗುವ ಲಂಡನ್ ನ ಬಕಿಂಗ್ಹ್ಯಾಮ್ ಅರಮನೆ ಎದುರಿನ ‘ದಿ ಮಾಲ್’ ರಸ್ತೆ ಮಂಗಳವಾರ ಒಂದು ಅಪರೂಪದ ಕ್ರೀಡಾ ಚಟುವಟಿಕೆಗೆ ವೇದಿಕೆಯಾಗಿತ್ತು. ಬ್ರಿಟನ್ ರಾಜಕುಮಾರ ಪ್ರಿನ್ಸ್ ವಿಲಿಯಂ, ವಾಹನ ಸಂಚಾರವನ್ನು ತಡೆದು ದಿ ಮಾಲ್ ರಸ್ತೆಯನ್ನು ತಾತ್ಕಾಲಿಕ ಕ್ರಿಕೆಟ್ ಪಿಚ್ ಆಗಿ ಪರಿವರ್ತಿಸಿ ಕ್ರಿಕೆಟ್ ದಂತಕಥೆಗಳ ಜೊತೆ ಆಟವಾಡಿದ್ದಾರೆ.ಈ ಮೂಲಕ ಲಂಡನ್ನ ಪ್ರತಿಷ್ಠಿತ ರಸ್ತೆಯಲ್ಲಿ ಕ್ರಿಕೆಟ್ ಕಳೆಗಟ್ಟಿತ್ತು. ಪರಿಸರ ಸಂರಕ್ಷಣೆಗಾಗಿ ತಾವು ಸ್ಥಾಪಿಸಿರುವ ‘ಅರ್ಥ್ಶಾಟ್’ ಬಹುಮಾನದ ಪ್ರಚಾರಕ್ಕಾಗಿ ಹಾಗೂ ಬ್ರಿಟನ್-ಭಾರತದ ನಡುವಿನ ಕ್ರೀಡಾ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದಿಂದ ಈ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕ್ರಿಕೆಟ್ ದಂತಕಥೆಗಳ ಜೊತೆ ರಾಜಕುಮಾರನ ಆಟ
ಈ ವಿಶೇಷ ಕ್ರಿಕೆಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ವೆಸ್ಟ್ ಇಂಡೀಸ್ನ ದಂತಕಥೆ ಬ್ರಿಯಾನ್ ಲಾರಾ ಹಾಗೂ ಇಂಗ್ಲೆಂಡ್ನ ಹಾಲಿ ಆಟಗಾರ ಜೋ ರೂಟ್ ಸೇರಿದಂತೆ ಹಲವು ಹಾಲಿಮತ್ತುಮಾಜಿಅಂತಾರಾಷ್ಟ್ರೀಯಆಟಗಾರರುಪಾಲ್ಗೊಂಡಿದ್ದರು.ಬಕಿಂಗ್ಹ್ಯಾಮ್ ಅರಮನೆಯ ಹಿನ್ನೆಲೆಯಲ್ಲಿ ಶರ್ಟ್ ಮತ್ತು ಸ್ವೆಟರ್ ಧರಿಸಿದ್ದ ಪ್ರಿನ್ಸ್ ವಿಲಿಯಂ, ಸೌರವ್ ಗಂಗೂಲಿ ಎಸೆದ ಚೆಂಡುಗಳಿಗೆ ಅತ್ಯಾಕರ್ಷಕ ಬ್ಯಾಟಿಂಗ್ ಮಾಡಿದರು. ಅಷ್ಟೇ ಅಲ್ಲದೆ, ತಾವೂ ಬೌಲಿಂಗ್ ಮಾಡುವ ಮೂಲಕ ನೆರೆದಿದ್ದ ವೀಕ್ಷಕರನ್ನು ರಂಜಿಸಿದರು. ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಳ್ಳಲು ನೆರೆದಿದ್ದ ಕ್ರೀಡಾಭಿಮಾನಿಗಳ ಜೊತೆ ಬೆರೆತ ರಾಜಕುಮಾರ, ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸರಳತೆ ಮೆರೆದರು.
ಗಂಗೂಲಿ ಶ್ಲಾಘನೆ, ಲಾರಾ ತಮಾಷೆಯ ಟೀಕೆ
ಪ್ರನ್ಸ್ ವಿಲಿಯಂ ಅವರ ಸರಳ ವ್ಯಕ್ತಿತ್ವ ಮತ್ತು ಬ್ಯಾಟಿಂಗ್ ಶೈಲಿಯನ್ನು ಸೌರವ್ ಗಂಗೂಲಿ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. “ಅವರು ತುಂಬಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ನಾನು ಎಂಟು-ಒಂಬತ್ತು ವರ್ಷಗಳ ನಂತರ ಕ್ರಿಕೆಟ್ ಬ್ಯಾಟ್ ಹಿಡಿದಿದ್ದರಿಂದ, ನನಗಿಂತ ಅವರೇ ಉತ್ತಮವಾಗಿ ಆಡಿದರು. ವಿಲಿಯಂ ಅತ್ಯಂತ ಸರಳ ಹಾಗೂ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಹೊಂದಿದ್ದಾರೆ. ಭಾರತ ಯಾವಾಗಲೂ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತದೆ,” ಎಂದು ಗಂಗೂಲಿ ಹರ್ಷ ವ್ಯಕ್ತಪಡಿಸಿದರು. ಮತ್ತೊಂದೆಡೆ, ವಿಲಿಯಂ ಬ್ಯಾಟಿಂಗ್ ಅನ್ನು ಹೊಗಳಿದ ಬ್ರಿಯಾನ್ ಲಾರಾ, ಅವರ ಬೌಲಿಂಗ್ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. “ಅವರು ತಮ್ಮನ್ನು ತಾವೇ ಕಡಿಮೆ ಅಂದಾಜಿಸಿಕೊಳ್ಳುತ್ತಾರೆ. ತಾನೊಬ್ಬ ಫುಟ್ಬಾಲ್ ಅಭಿಮಾನಿ, ಕ್ರಿಕೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ ಎನ್ನುತ್ತಾರೆ. ಅವರ ಬೌಲಿಂಗ್ ಸುಧಾರಣೆಯಾಗಬೇಕಿದೆ. ಆದರೆ, ಬ್ಯಾಟಿಂಗ್ ವಿಚಾರದಲ್ಲಿ ನಾನು ಅವರನ್ನು ಖಂಡಿತವಾಗಿಯೂ ಪ್ಲೇಯಿಂಗ್ 11ರ 6ನೇ ಅಥವಾ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುತ್ತೇನೆ,” ಎಂದು ಲಾರಾ ನಗುತ್ತಲೇ ಹೇಳಿದರು.
ಭಾರತದಲ್ಲಿ ನಡೆಯಲಿರುವ ಅರ್ಥ್ಶಾಟ್ ಶೃಂಗಸಭೆ
ಮುಂದಿನ ತಿಂಗಳು ಭಾರತದಲ್ಲಿ ‘ಅರ್ಥ್ಶಾಟ್ ಪ್ರೈಸ್’ ಶೃಂಗಸಭೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಪ್ರತಿಷ್ಠಿತ ಪರಿಸರ ಪ್ರಶಸ್ತಿಯನ್ನು ಸ್ವತಃ ಪ್ರಿನ್ಸ್ ವಿಲಿಯಂ ಅವರೇ ಸ್ಥಾಪಿಸಿದ್ದಾರೆ. ಈ ಮಹತ್ವದ ಕಾರ್ಯಕ್ರಮದ ಅಂಗವಾಗಿಯೇ ಲಂಡನ್ನಲ್ಲಿ ಈ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಭಾರತ ಮತ್ತು ಬ್ರಿಟನ್ ನಡುವಿನ ಕ್ರಿಕೆಟ್ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಒಟ್ಟಾರೆಯಾಗಿ, ಬಕಿಂಗ್ಹ್ಯಾಮ್ ಅರಮನೆಯ ಎದುರು ನಡೆದ ಈ ರಸ್ತೆ ಕ್ರಿಕೆಟ್ ಕ್ರೀಡಾಭಿಮಾನಿಗಳಲ್ಲಿ ಮತ್ತು ನೆರೆದಿದ್ದ ಜನರಲ್ಲಿ ಸಂಚಲನ ಮೂಡಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಯವರಿಂದ ಏಷ್ಯನ್ ಗೇಮ್ಸ್ ಕ್ರೀಡಾಪಟುಗಳ ಸನ್ಮಾನ : BCCIನ IPL ಪಾಲುದಾರರ ಮಹತ್ವದ ಸಭೆ ಮುಂದೂಡಿಕೆ!



















