ನವದೆಹಲಿ: ರಾಷ್ಟ್ರ ರಾಜಧಾನಿಯ ಐತಿಹಾಸಿಕ ಜಂತರ್ ಮಂತರ್ ಪ್ರದೇಶವನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಕೈಬಿಟ್ಟು (ಡೆನೋಟಿಫೈ) ಕೇಂದ್ರ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ದೆಹಲಿಯಲ್ಲಿ ಹೈಡ್ರಾಮಾ ನಡೆದಿದೆ. ಇಂದು ಮುಂಜಾನೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರು ಹಾಗೂ ಕಾರ್ಯಕರ್ತರು ಜಂತರ್ ಮಂತರ್‌ನಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಬ್ಯಾರಿಕೇಡ್ ಹಾರಿ ಪ್ರತಿಭಟನೆ
ಸಿಜೆಪಿ ನಾಯಕರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ನೇತೃತ್ವದಲ್ಲಿ ಆಗಮಿಸಿದ ಕಾರ್ಯಕರ್ತರ ತಂಡವು, ಪೊಲೀಸರು ಅಳವಡಿಸಿದ್ದ ಕಬ್ಬಿಣದ ಗೇಟ್ ಹಾಗೂ ಬ್ಯಾರಿಕೇಡ್‌ಗಳನ್ನು ನೆಗೆದು ಜಂತರ್ ಮಂತರ್ ಆವರಣ ಪ್ರವೇಶಿಸಿತು. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ‘ಭಾರತ್ ಮಾತಾ ಕೀ ಜೈ’ ಹಾಗೂ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳದಲ್ಲಿದ್ದ ದೆಹಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದಾಗ ಸಣ್ಣಮಟ್ಟದ ತಳ್ಳಾಟವೂ ನಡೆಯಿತು. ಅಂತಿಮವಾಗಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
“ಪ್ರತಿರೋಧವನ್ನು ಅಳಿಸಿಹಾಕಲು ಸಾಧ್ಯವಿಲ್ಲ”
ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಪ್ರತಿರೋಧವನ್ನು ಎಂದಿಗೂ ಡೆನೋಟಿಫೈ ಮಾಡಲು ಅಥವಾ ಅಳಿಸಿಹಾಕಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಭಟನೆಗಳ ಭಯ ಎದ್ದು ಕಾಣುತ್ತಿದೆ. ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಿದರೆ ಧರಣಿಗಳು ನಿಲ್ಲುತ್ತವೆ ಎಂದು ಅವರು ಭಾವಿಸಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ದೇಶಾದ್ಯಂತ ಹೊಸ ಜಂತರ್ ಮಂತರ್‌ಗಳು ಹುಟ್ಟಿಕೊಳ್ಳಲಿವೆ” ಎಂದು ಅವರು ಎಚ್ಚರಿಸಿದ್ದಾರೆ.
ಮೂರು ಹೊಸ ಪ್ರತಿಭಟನಾ ಸ್ಥಳಗಳ ನಿಗದಿ
ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸಿನಂತೆ ನವದೆಹಲಿಯ ಅತಿ ಭದ್ರತೆಯ ವಲಯದಲ್ಲಿರುವ ಜಂತರ್ ಮಂತರ್‌ನಲ್ಲಿ ಇನ್ಮುಂದೆ ಯಾವುದೇ ಧರಣಿ ಅಥವಾ ಪ್ರತಿಭಟನೆಗಳಿಗೆ ಅವಕಾಶವಿಲ್ಲ ಎಂದು ಸರ್ಕಾರ ತಿಳಿಸಿದೆ. ಇದರ ಬದಲಾಗಿ ದೆಹಲಿಯಲ್ಲಿ ಮೂರು ಹೊಸ ಸ್ಥಳಗಳನ್ನು ಪ್ರತಿಭಟನೆಗಾಗಿ ಕಾಯ್ದಿರಿಸಲಾಗಿದೆ:ರಾಮಲೀಲಾ ಮೈದಾನ, ಬುರಾರಿ ಮೈದಾನ, ಪೂರ್ವ ದೆಹಲಿಯ ಸಿಬಿಡಿ (CBD) ಮೈದಾನದಲ್ಲಷ್ಟೇ ಪ್ರತಿಭಟನೆಗೆ ಅವಕಾಶವಿರಲಿದೆ.
ಇತ್ತೀಚೆಗೆ ಎಸ್ಐಆರ್ (SIR) ವಿವಾದಕ್ಕೆ ಸಂಬಂಧಿಸಿದಂತೆ ವಿಪಕ್ಷಗಳ ‘ಇಂಡಿಯಾ’ ಒಕ್ಕೂಟ ಹಾಗೂ ಸಿಜೆಪಿ ಪಕ್ಷಗಳು ಕೇಂದ್ರ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಿಂದಲೇ ದೆಹಲಿ ಪೊಲೀಸರು ಈ ಭಾಗದಲ್ಲಿ ಕಟ್ಟುನಿಟ್ಟಿನ ಭದ್ರತೆ ಒದಗಿಸಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದಾರೆ.
ಇದನ್ನೂ ಓದಿ:ನಿಶ್ಚಿತಾರ್ಥ ಮುರಿದುಕೊಂಡಿದ್ದ ಕ್ರಿಕೆಟಿಗ ಪೃಥ್ವಿ ಶಾ- ಆಕೃತಿ ಅಗರ್ವಾಲ್ ಮತ್ತೆ ಒಂದು!



















