ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ನಲ್ಲಿ ಶನಿವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ಹತ್ತಿಕ್ಕಿದ್ದ ಪೊಲೀಸರು, ಕಾಕ್ರೋಚ್ ಜನತಾ ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದು, ಇಂದು ಅವರನ್ನು ಬಿಡುಗಡೆ ಮಾಡಲಾಗಿದೆ.
ನ್ಯಾಯಾಲಯದಿಂದ ಕಠಿಣ ಷರತ್ತುಗಳೊಂದಿಗೆ ಬಿಡುಗಡೆ
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಿಜೆಪಿ ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಶನಿವಾರ ದೆಹಲಿಗೆ ಬಂದಿಳಿದ ತಕ್ಷಣ ವಿಮಾನದ ಒಳಗಡೆಯೇ ಪೊಲೀಸರು ತಡೆದು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದರು. ದೆಹಲಿ ಪೋಲೀಸರ ಪ್ರಕಾರ, ಬಿಎನ್‌ಎಸ್ಎಸ್ (BNSS) ಕಾಯಿದೆಯ ಸೆಕ್ಷನ್ 126/170ರ ಅಡಿಯಲ್ಲಿ ಇವರನ್ನು ವಶಕ್ಕೆ ಪಡೆಯಲಾಗಿದ್ದು, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಇಂದು ಬೆಳಿಗ್ಗೆ ದೆಹಲಿ ಕಂಟೋನ್ಮೆಂಟ್‌ನ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.ನ್ಯಾಯಾಲಯದ ವಿಚಾರಣೆಯ ಬಳಿಕ, ಮುಂಬರುವ ಒಂದು ವರ್ಷದವರೆಗೆ ಯಾವುದೇ ರೀತಿಯ ಶಾಂತಿಭಂಗದ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ ಎಂಬ ಮುಚ್ಚಳಿಕೆ ಹಾಗೂ 50,000 ರೂಪಾಯಿಗಳ ಶ್ಯೂರಿಟಿ ಬಾಂಡ್ ಪಡೆದು ಮೂವರು ಸಿಜೆಪಿ ನಾಯಕರನ್ನು ಬಿಡುಗಡೆಗೊಳಿಸಲಾಗಿದೆ. ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಈ ಕಠಿಣ ಷರತ್ತು ವಿಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಇದೇ ವೇಳೆ, ರಾಷ್ಟ್ರ ರಾಜಧಾನಿಯಲ್ಲಿ ತೀವ್ರ ಉದ್ವಿಗ್ನತೆ ಮುಂದುವರಿದಿದೆ. ಇಂದು ಕೂಡ ದೆಹಲಿಯಲ್ಲಿ ಪ್ರತಿಭಟನೆ ನಡೆಯಲಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ದೆಹಲಿ ಪೊಲೀಸರು ವ್ಯಾಪಕ ಭದ್ರತಾ ಕವಚವನ್ನು ನಿರ್ಮಿಸಿದ್ದು, ಮೆಟ್ರೋ ನಿಲ್ದಾಣಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಭಾರೀ ತುಕಡಿಗಳನ್ನು ನಿಯೋಜಿಸಲಾಗಿದೆ. ನಿನ್ನೆ ನಡೆದ ಪೂರ್ವಯೋಜಿತ ಪ್ರತಿಭಟನೆಯ ವೇಳೆ ಮೂರು ಸಾವಿರಕ್ಕೂ ಅಧಿಕ ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ರಾತ್ರಿಯ ವೇಳೆಗೆ ಬಿಡುಗಡೆ ಮಾಡಲಾಗಿದೆ.ಸುಮಾರು 13 ಕೋಟಿ ಮತಗಳ ತಿರುಚುವಿಕೆ ಮತ್ತು ಅಕ್ರಮ ಕುರಿತು ಸರ್ಕಾರದ ಹೊಣೆಗಾರಿಕೆಯನ್ನು ಪ್ರಶ್ನಿಸಿ ಬೀದಿಗಿಳಿದು ಪ್ರತಿಭಟಿಸುವ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸಿಜೆಪಿ ನಾಯಕರು ಎಚ್ಚರಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರಜಾಪ್ರಭುತ್ವದ ಧ್ವನಿಯನ್ನು ಹತ್ತಿಕ್ಕಲು ‘ಅಘೋಷಿತ ತುರ್ತು ಪರಿಸ್ಥಿತಿ’ ಹೇರಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪ್ರತಿಭಟನೆ ಹಾಗೂ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳ ನಡುವೆ ದೆಹಲಿಯಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.
ಇದನ್ನೂ ಓದಿ:ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಸಿಹಿಸುದ್ದಿ: ಋತುಚಕ್ರ ರಜೆಗೆ ಇನ್ನು ಸ್ವಯಂಚಾಲಿತ ಅನುಮೋದನೆ!


















