ಮುಂಬೈ : ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕಿ ಹೇಲಿ ಮ್ಯಾಥ್ಯೂಸ್ ದಾಖಲೆಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಹರಾರೆ ಸ್ಪೋರ್ಟ್ಸ್ ಕ್ಲಬ್ನಲ್ಲಿ ನಡೆದ ಪಂದ್ಯದಲ್ಲಿ ಮ್ಯಾಥ್ಯೂಸ್ 156 ಎಸೆತಗಳಲ್ಲಿ 182 ರನ್ ಸಿಡಿಸಿ, ಮಹಿಳಾ ಏಕದಿನ ಕ್ರಿಕೆಟ್ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಎರಡು ಬಾರಿ 150ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮ್ಯಾಥ್ಯೂಸ್ ಅವರ ಈ ಸಾಧನೆ ಮತ್ತೊಂದು ಕಾರಣಕ್ಕೂ ವಿಶೇಷವಾಗಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್ನಲ್ಲಿ ಎರಡು 150ಕ್ಕೂ ಹೆಚ್ಚು ರನ್ಗಳ ಇನ್ನಿಂಗ್ಸ್ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ಅವರು ಭಾರತದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಸ್ಥಾನ ಪಡೆದಿದ್ದಾರೆ. ಒಟ್ಟಾರೆ ಇಂತಹ ಸಾಧನೆ ಮಾಡಿದ ಆಟಗಾರರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.
156 ಎಸೆತಗಳಲ್ಲಿ 182 ರನ್
ಜಿಂಬಾಬ್ವೆ ವಿರುದ್ಧ ಆರಂಭಿಕರಾಗಿ ಕಣಕ್ಕಿಳಿದ ಮ್ಯಾಥ್ಯೂಸ್, ರಿಯಲೀನ್ನಾ ಗ್ರಿಮಂಡ್ ಅವರೊಂದಿಗೆ ಮೊದಲ ವಿಕೆಟ್ಗೆ 128 ರನ್ಗಳ ಜೊತೆಯಾಟ ನೀಡಿದರು. ಗ್ರಿಮಂಡ್ 53 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕವೂ ಮ್ಯಾಥ್ಯೂಸ್ ತಮ್ಮ ಆಕ್ರಮಣಕಾರಿ ಆಟ ಮುಂದುವರಿಸಿದರು. 156 ಎಸೆತಗಳನ್ನು ಎದುರಿಸಿದ ಅವರು 25 ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ನೆರವಿನಿಂದ 182 ರನ್ ಗಳಿಸಿದರು.
ಈ ಶತಕದೊಂದಿಗೆ ಮ್ಯಾಥ್ಯೂಸ್ ವೆಸ್ಟ್ ಇಂಡೀಸ್ ಮಹಿಳಾ ಕ್ರಿಕೆಟ್ನಲ್ಲಿ ಏಕದಿನದ ಅತ್ಯಧಿಕ ವೈಯಕ್ತಿಕ ಸ್ಕೋರ್ ದಾಖಲಿಸಿದ ಆಟಗಾರ್ತಿಯಾಗಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಸ್ಟೆಫಾನಿ ಟೇಲರ್ ಅವರ ಹೆಸರಲ್ಲಿತ್ತು. ಟೇಲರ್ 171 ರನ್ ಗಳಿಸಿದ್ದರು. ಮ್ಯಾಥ್ಯೂಸ್ ಅವರ ಹಿಂದಿನ ವೈಯಕ್ತಿಕ ಗರಿಷ್ಠ ಸ್ಕೋರ್ 159 ರನ್ ಆಗಿತ್ತು.
ಮಹಿಳಾ ಏಕದಿನದ ಅಗ್ರ ದಾಖಲೆಗಳ ಪಟ್ಟಿಯಲ್ಲೂ ಸ್ಥಾನ
182 ರನ್ಗಳ ಈ ಇನ್ನಿಂಗ್ಸ್ ಮಹಿಳಾ ಏಕದಿನ ಕ್ರಿಕೆಟ್ನ ಅತ್ಯಧಿಕ ವೈಯಕ್ತಿಕ ಸ್ಕೋರ್ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಪಡೆದಿದೆ. ನ್ಯೂಜಿಲೆಂಡ್ನ ಅಮೆಲಿಯಾ ಕೆರ್ 232 ರನ್ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ 229, ಶ್ರೀಲಂಕಾದ ಚಮಾರಿ ಅಥಪತ್ತು 195, ಭಾರತದ ದೀಪ್ತಿ ಶರ್ಮಾ 188 ಹಾಗೂ ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಟ್ 184 ರನ್ಗಳೊಂದಿಗೆ ಮ್ಯಾಥ್ಯೂಸ್ಗಿಂತ ಮುಂದಿದ್ದಾರೆ.
99 ರನ್ಗಳಿಂದ ವೆಸ್ಟ್ ಇಂಡೀಸ್ ಗೆಲುವು
ಮ್ಯಾಥ್ಯೂಸ್ ಅವರ ದಾಖಲೆಯ ಇನ್ನಿಂಗ್ಸ್ನ ನೆರವಿನಿಂದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 6 ವಿಕೆಟ್ಗೆ 299 ರನ್ ಗಳಿಸಿತು. ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡ 43.3 ಓವರ್ಗಳಲ್ಲಿ 200 ರನ್ಗಳಿಗೆ ಆಲೌಟ್ ಆಯಿತು. ಜಿಂಬಾಬ್ವೆ ಪರ ಮೊಡೆಸ್ಟರ್ ಮುಪಾಚಿಕ್ವಾ 86 ರನ್ ಗಳಿಸಿದರೂ, ಉಳಿದ ಬ್ಯಾಟರ್ಗಳಿಂದ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಅಂತಿಮವಾಗಿ ವೆಸ್ಟ್ ಇಂಡೀಸ್ 99 ರನ್ಗಳ ಭರ್ಜರಿ ಗೆಲುವು ದಾಖಲಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಇದನ್ನೂ ಓದಿ : ಸಹಕಾರಿ ಬ್ಯಾಂಕ್ನಲ್ಲಿ ಡೆಪ್ಯೂಟಿ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಹುದ್ದೆಗಳ ನೇಮಕಾತಿ : 70 ಸಾವಿರ ರೂ. ಸಂಬಳ



















