ನವದೆಹಲಿ : ದೇಶದ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಯೆದ್ದಿದ್ದು, ಇದಕ್ಕೆ ಸೋಮವಾರ ರಾತ್ರಿ ನಡೆದ ಘಟನೆಯೇ ಕಾರಣ. ದಕ್ಷಿಣ ದೆಹಲಿಯ ಕಲ್ಕಾಜಿ ಮಂದಿರದ ಬಳಿಯ ಸಾರ್ವಜನಿಕ ಉದ್ಯಾನವನದಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸರ ಸೋಗಿನಲ್ಲಿ ಬಂದ ಮೂವರು ಭೀಕರವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನಡೆದಿದೆ. ಪ್ರಕರಣದ ತನಿಖೆ ನಡೆಸಿರುವ ದೆಹಲಿ ಪೊಲೀಸರು ಎನ್‌ಕೌಂಟರ್ ನಡೆಸಿ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಆ ಬಳಿಕ ತಲೆಮರೆಸಿಕೊಂಡಿದ್ದ ಉಳಿದಿಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಸೋಗಿನಲ್ಲಿ ಬೆದರಿಸಿ ಕೃತ್ಯ
ಸಂತ್ರಸ್ತ ಬಾಲಕಿ ಸೋಮವಾರ ಸಂಜೆ ಸುಮಾರು 7 ಗಂಟೆಯ ವೇಳೆಗೆ ತನ್ನ ಗೆಳೆಯನೊಂದಿಗೆ ಕಲ್ಕಾಜಿ ದೇವಸ್ಥಾನಕ್ಕೆ ತೆರಳಿದ್ದಳು. ದೇವರ ದರ್ಶನ ಮುಗಿಸಿ 7.30 ರ ಸುಮಾರಿಗೆ ಮಂದಿರದ ಸಮೀಪದಲ್ಲೇ ಇರುವ ಉದ್ಯಾನವನಕ್ಕೆ ಇಬ್ಬರೂ ತೆರಳಿದ್ದರು. ಈ ವೇಳೆ ಸುಮಾರು 25 ರಿಂದ 30 ವರ್ಷ ವಯೋಮಾನದ ಮೂವರು ವ್ಯಕ್ತಿಗಳು ಇವರ ಬಳಿ ಬಂದು, ತಾವು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಬಾಲಕಿ ಹಾಗೂ ಆಕೆಯ ಗೆಳೆಯನಿಗೆ ಜೀವ ಬೆದರಿಕೆ ಒಡ್ಡಿದ ಆರೋಪಿಗಳು, ಮಾರಕಾಸ್ತ್ರ ಮತ್ತು ಬಂದೂಕು ತೋರಿಸಿ ಬಾಲಕಿಯ ಮೇಲೆ ಒಬ್ಬರ ನಂತರ ಒಬ್ಬರಂತೆ ಕ್ರೂರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಕೃತ್ಯ ಎಸಗಿದ ಬಳಿಕ ಯಾರಿಗೂ ವಿಷಯ ತಿಳಿಸದಂತೆ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನೆ ನಡೆದ ತಕ್ಷಣ ಅಂದರೆ ರಾತ್ರಿ 8.45 ರ ಸುಮಾರಿಗೆ ಕಂಟ್ರೋಲ್ ರೂಮ್‌ಗೆ ಸಾರ್ವಜನಿಕ ತುರ್ತು ಕರೆ (PCR) ಬಂದಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕಲ್ಕಾಜಿ ಠಾಣೆ ಪೊಲೀಸರು, ಸಂತ್ರಸ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಿದರು. ಉದ್ಯಾನವನದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳ ಸುಳಿವು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಯಿತು.
ಆರೋಪಿಯೊಬ್ಬ ಆಮರ್ ಕಾಲೋನಿಯ ಡಿಎಂ ಆಫೀಸ್ ರಸ್ತೆ ಬಳಿ ಸಂಚರಿಸುತ್ತಿರುವ ನಿರ್ದಿಷ್ಟ ಮಾಹಿತಿ ಲಭ್ಯವಾಗುತ್ತಿದ್ದಂತೆ ಪೊಲೀಸರು ಕಾರ್ಯಾಚರಣೆ ನಡೆಸಿದರು. ಆತನನ್ನು ತಡೆಯಲು ಯತ್ನಿಸಿದಾಗ ಆರೋಪಿಯು ಪೊಲೀಸರ ಮೇಲೆಯೇ ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಪೊಲೀಸರು ಶರಣಾಗುವಂತೆ ಸೂಚಿಸಿದರೂ ಗುಂಡಿನ ದಾಳಿ ಮುಂದುವರಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಆರೋಪಿಯ ಬಲಗಾಲಿಗೆ ಗುಂಡು ಬಿದ್ದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆಯಲಾಯಿತು. ಈತ ಓಖ್ಲಾ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮೂವರೂ ಆರೋಪಿಗಳು ಈಗ ಕಂಬಿ ಹಿಂದೆ
ಬಂಧಿತ ಆಸಿಫ್ ನೀಡಿದ ಮಾಹಿತಿ ಹಾಗೂ ತನಿಖೆಯ ಆಧಾರದ ಮೇಲೆ, ಘಟನೆಯಲ್ಲಿ ಭಾಗಿಯಾಗಿದ್ದ ಹೆಮಂತ್ ಮತ್ತು ಮುಕೇಶ್ ಎಂಬ ಇನ್ನಿಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ (POCSO) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
10 ದಿನಗಳಲ್ಲಿ 4 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ
ರಾಜಧಾನಿ ದೆಹಲಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದೆ. ಕಳೆದ ಕೇವಲ 10 ದಿನಗಳ ಅವಧಿಯಲ್ಲಿ ವರದಿಯಾದ 4ನೇ ಘಟನೆ ಇದಾಗಿದೆ. ಸೆಪ್ಟೆಂಬರ್ 13 ರಂದು ಸ್ವರೂಪ್ ನಗರದಲ್ಲಿ 17 ವರ್ಷದ ಬಾಲಕಿಯ ಮೇಲೆ ಗ್ಯಾಂಗ್‌ರೇಪ್ ನಡೆಸಿ ಕೊಲೆ ಮಾಡಲಾಗಿತ್ತು. ಸೆಪ್ಟೆಂಬರ್ 16 ರಂದು ಸದರ್ ಬಜಾರ್‌ನಲ್ಲಿ 10 ವರ್ಷದ ಬಾಲಕಿಯ ಕೈಕಾಲು ಕಟ್ಟಿ ದೌರ್ಜನ್ಯ ಎಸಗಲಾಗಿತ್ತು, ಸೆಪ್ಟೆಂಬರ್ 21 ರಂದು ಕಿಶನ್ ಗಂಜ್‌ನಲ್ಲಿ 6 ವರ್ಷದ ಮಗುವಿನ ಮೇಲೆಯೂ ಲೈಂಗಿಕ ದಾಳಿ ನಡೆದಿತ್ತು.
ಇದನ್ನೂ ಓದಿ : ಕೇಂದ್ರದ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ 12 ಹುದ್ದೆಗಳ ನೇಮಕಾತಿ : ಹೀಗೆ ಅರ್ಜಿ ಸಲ್ಲಿಸಿ


















