ಬೆಂಗಳೂರು : ಬಿಜೆಪಿಯವರನ್ನು ಟೀಕಿಸುವ ಭರದಲ್ಲಿ ರಣಹದ್ದುಗಳ ಬಗ್ಗೆ ತಪ್ಪು ಸಂದೇಶ ಹರಡಲಾಗಿದೆ ಎಂದು ಆರೋಪಿಸಿ ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ರಾಮನಗರ ಎಸ್ಪಿ ಕಚೇರಿಗೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಕುಮಾರಸ್ವಾಮಿ ಅವರು ದೂರು ಸಲ್ಲಿಸಿ, ಅಳಿವಿನಂಚಿನಲ್ಲಿರುವ ರಣಹದ್ದುಗಳ ಬಗ್ಗೆ ಅವಮಾನಕರ ಹೇಳಿಕೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಟಿ.ನರಸೀಪುರ ಗಲಭೆ ವಿಚಾರವಾಗಿ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡುವ ವೇಳೆ ಯತೀಂದ್ರ ಸಿದ್ದರಾಮಯ್ಯ ಅವರು ಬಿಜೆಪಿಯವರನ್ನು ‘ರಣಹದ್ದುಗಳು’ ಎಂದು ಟೀಕಿಸಿದ್ದರು. ಕೋಮುಗಲಭೆ ನಡೆಯುವುದನ್ನೇ ಬಿಜೆಪಿ ಕಾಯುತ್ತಿದೆ ಎಂದು ಅವರು ಆರೋಪಿಸಿದ್ದರು.
ಇದೇ ಹೇಳಿಕೆಯನ್ನು ಆಧರಿಸಿ ಕುಮಾರಸ್ವಾಮಿ ಅವರು ದೂರು ನೀಡಿದ್ದು, ರಣಹದ್ದುಗಳನ್ನು ಕ್ರೂರಿಗಳು ಹಾಗೂ ಗಲಭೆ ಸೃಷ್ಟಿಸುವ ಪಕ್ಷಿಗಳಂತೆ ಬಿಂಬಿಸುವ ಮೂಲಕ ವನ್ಯಜೀವಿ ಪ್ರಿಯರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ್ದಾರೆ. ಸಚಿವರ ಹೇಳಿಕೆಯಿಂದ ಅಳಿವಿನಂಚಿನಲ್ಲಿರುವ ಪಕ್ಷಿಯ ಬಗ್ಗೆ ತಪ್ಪು ಸಂದೇಶ ಹರಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ರಣಹದ್ದುಗಳ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಾಗುತ್ತದೆ ಎಂದು ದೂರುದಾರರು ಆರೋಪಿಸಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ಸಚಿವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಮನಗರ ಎಸ್ಪಿ ಕಚೇರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಗ್ರಾಮೀಣ ರಸ್ತೆಗಳ ಗುಂಡಿ ಪತ್ತೆಗೆ AI : ಮೊಬೈಲ್ ವಿಡಿಯೋ ಮೂಲಕ ದೋಷ ಗುರುತಿಸುವ ಪ್ರಾಯೋಗಿಕ ಯೋಜನೆ ಆರಂಭ!


















