ಬೆಂಗಳೂರು : ಬೆಂಗಳೂರಿನಲ್ಲಿ ಸತತ ಮೂರು ದಿನಗಳಿಂದ ಧಾರಾಕಾರ ಮಳೆ ಮುಂದುವರಿದಿದ್ದು, ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ.
ಭಾನುವಾರ ರಾತ್ರಿ ಆರಂಭವಾದ ಮಳೆ ಸೋಮವಾರ ತಡರಾತ್ರಿವರೆಗೂ ಮುಂದುವರಿದಿದ್ದು, ಬಿಸಿಲಿನ ತಾಪ ಕಡಿಮೆಯಾಗಿ ನಗರದಲ್ಲಿ ತಂಪಾದ ವಾತಾವರಣ ನಿರ್ಮಾಣವಾಗಿದೆ. ಇಂದು ಬೆಳಗ್ಗೆಯೂ ಕೂಡ ನಗರದಲ್ಲಿ ಮೋಡ ಕವಿದ ವಾತವರಣವಿದ್ದು, ಅಲ್ಲಲ್ಲಿ ಧಾರಾಕಾರ ಮಳೆಯಾಗುತ್ತಿದೆ.
ಮಳೆ ಹಿನ್ನೆಲೆ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿದೆ. ಬಾಗಲೂರು ಕ್ರಾಸ್ನಲ್ಲಿ ಮಳೆ ನೀರು ನಿಂತ ಪರಿಣಾಮ ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿವೆ. ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೂ ವಾಹನ ದಟ್ಟಣೆ ಕಂಡುಬಂದಿದೆ. ಬಿ.ನಾರಾಯಣಪುರ ಮುಖ್ಯ ರಸ್ತೆಯಲ್ಲಿ ನೀರು ನಿಂತಿದ್ದು, ಲೋರಿ ಜಂಕ್ಷನ್ ಕಡೆಗೆ ಭಾರಿ ಟ್ರಾಫಿಕ್ ಉಂಟಾಗಿದೆ. ಮಾರತ್ಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೂ ವಾಹನ ಸಂಚಾರ ದಟ್ಟವಾಗಿದೆ.
ಮೇಲ್ಸೇತುವೆಗಳಲ್ಲೂ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಮೈಸೂರು ರಸ್ತೆಯ ಬಿಜಿಎಸ್ ಮೇಲ್ಸೇತುವೆ ಹಾಗೂ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ನೀರು ನಿಂತಿದ್ದು, ವಾಹನ ಸವಾರರು ನಿಧಾನವಾಗಿ ಸಂಚರಿಸುವಂತಾಗಿದೆ. ರಸ್ತೆ ಸ್ವಚ್ಛತಾ ಯಂತ್ರಗಳ ಕಾರ್ಯದ ಬಗ್ಗೆಯೂ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆಯಿಂದ ರಾತ್ರಿವರೆಗೆ ಬೆಂಗಳೂರಿನಲ್ಲಿ ಸರಾಸರಿ 2 ಸೆಂ.ಮೀ ಮಳೆಯಾಗಿದೆ. ಯಲಹಂಕ ಸುತ್ತಮುತ್ತ ಹೆಚ್ಚಿನ ಮಳೆ ದಾಖಲಾಗಿದೆ. ಹೆಮ್ಮಿಗೆಪುರ, ಮೂಡಲಪಾಳ್ಯ, ನಾಗರಬಾವಿ ಹಾಗೂ ಉತ್ತರಹಳ್ಳಿಯಲ್ಲಿ ತಲಾ 4.1 ಸೆಂ.ಮೀ ಮಳೆಯಾಗಿದ್ದರೆ, ವಿಜಯನಗರದಲ್ಲಿ 2.8 ಸೆಂ.ಮೀ ಮಳೆ ದಾಖಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲೂ ಗುಡುಗು-ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇರುವುದರಿಂದ ನಗರದಲ್ಲಿ ಮಳೆ ಮುಂದುವರಿಯುವ ಮುನ್ಸೂಚನೆ ಇದೆ.
ಇದನ್ನೂ ಓದಿ : ಹುಬ್ಬಳ್ಳಿಯಲ್ಲಿ ಭೀಕರ ಅಪಘಾತ ; ಬೈಕ್ಗೆ ಕೊರಿಯರ್ ಗೂಡ್ಸ್ ವಾಹನ ಡಿಕ್ಕಿ, ದಂಪತಿ ಸಾವು



















