ಬೈಂದೂರು, ಸೆ.10 : ಇಲ್ಲಿನ ಶಿರೂರು ಕೆಳಪೇಟೆ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಶಿರೂರು ನಿವಾಸಿ ನಾಗೇಂದ್ರ ಮಹಾಲೆ (45) ಸ್ಥಳದಲ್ಲೇ ಮೃತಪಟ್ಟ ದುರ್ದೈವಿ. ಅಪಘಾತದ ರಭಸಕ್ಕೆ ಪೊಲೀಸ್ ವಾಹನ ಸೇರಿದಂತೆ ನಾಲ್ಕು ಬೈಕ್ಗಳು ಜಖಂಗೊಂಡಿದೆ.
ಶಿರೂರು ಗ್ರೀನ್ ವ್ಯಾಲಿ ಶಾಲೆ ಬಳಿಯ ಹೆದ್ದಾರಿಯಲ್ಲಿ ಮೊದಲೇ ಅಪಘಾತಕ್ಕೀಡಾಗಿ ನಿಂತಿದ್ದ ಲಾರಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಸಿಬ್ಬಂದಿ ಕ್ರೇನ್ ಸಹಾಯದಿಂದ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ರಸ್ತೆಯ ಒಂದು ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದೇ ಸಂದರ್ಭ ಕೇರಳದಿಂದ ಮಹಾರಾಷ್ಟ್ರದತ್ತ ರಬ್ಬರ್ ತುಂಬಿಕೊಂಡು ತೆರಳುತ್ತಿದ್ದ ಲಾರಿ ಒತ್ತಿನಣೆಯ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಇದ್ದ ವಾಹನಗಳತ್ತ ನುಗ್ಗಿದೆ.
ನಿಯಂತ್ರಣ ತಪ್ಪಿದ ಲಾರಿ ಸರಣಿ ಡಿಕ್ಕಿಗೆ ಕಾರಣವಾಗಿದ್ದು, ಮುಂದೆ ಸಾಗುತ್ತಿದ್ದ ಬೈಕ್ಗಳು ಹಾಗೂ ಹೈವೇ ಪೆಟ್ರೋಲ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ನಲ್ಲಿದ್ದ ನಾಗೇಂದ್ರ ಮಹಾಲೆ ಅವರ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈವೇ ಪೆಟ್ರೋಲ್ ವಾಹನದಲ್ಲಿದ್ದ ಪೊಲೀಸರು ಹಾಗೂ ಇತರ ಬೈಕ್ ಸವಾರರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಸರಣಿ ಅಪಘಾತದ ನಡುವೆಯೂ ಮತ್ತಷ್ಟು ಭಾರಿ ಅನಾಹುತ ಸಂಭವಿಸದೆ ತಪ್ಪಿದೆ.
ಘಟನೆ ಬಳಿಕ ಸ್ಥಳಕ್ಕೆ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಪಘಾತದಿಂದ ಅಸ್ತವ್ಯಸ್ತಗೊಂಡಿದ್ದ ಹೆದ್ದಾರಿ ಸಂಚಾರವನ್ನು ಪೊಲೀಸರು ಹಾಗೂ ಸಿಬ್ಬಂದಿ ತೆರವುಗೊಳಿಸಿದರು. ಬಳಿಕ ವಾಹನಗಳ ಸಂಚಾರಕ್ಕೆ ಸುಗಮ ವ್ಯವಸ್ಥೆ ಕಲ್ಪಿಸಲಾಯಿತು.
ಇದನ್ನೂ ಓದಿ : ಮನೆಯಲ್ಲಿ ಹಾಕಿದ್ದ ಸಿಸಿಟಿವಿಯೇ ಕೊಲೆ ಸಂಚಿಗೆ ಕಾರಣವಾಯಿತೇ? ಉದ್ಯಮಿ ಕೊಲೆ ಪ್ರಕರಣದಲ್ಲಿ ಸೊಸೆ ಅರೆಸ್ಟ್


















