ಬೆಂಗಳೂರು : ನಟ ದರ್ಶನ್ ಅವರ ಮೈಸೂರಿನ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ರದ್ದುಗೊಳಿಸುವಂತೆ ಕೋರಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಫಾರ್ಮ್‌ನಲ್ಲಿ ವಿವಿಧ ಜಾತಿಯ ಹಕ್ಕಿಗಳನ್ನು ಸಾಕಲಾಗುತ್ತಿತ್ತು. ಈ ನಡುವೆ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳು ಹೇಗೋ ಫಾರ್ಮ್‌ಹೌಸ್‌ಗೆ ಬಂದು ಸೇರಿಕೊಂಡಿವೆ. ಅರಣ್ಯ ಅಧಿಕಾರಿಗಳು ತಪಾಸಣೆ ನಡೆಸಿದ ಬಳಿಕವಷ್ಟೇ ಈ ವಿಚಾರ ತಮ್ಮ ಗಮನಕ್ಕೆ ಬಂದಿದೆ ಎಂದು ವಿಜಯಲಕ್ಷ್ಮಿ ಅರ್ಜಿಯಲ್ಲಿ ತಿಳಿಸಿದ್ದಾರೆ.
ತಾವು ಫಾರ್ಮ್‌ಹೌಸ್‌ಗೆ ಭೇಟಿ ನೀಡುವುದೇ ಇಲ್ಲ. ನಟ ದರ್ಶನ್ ಕೂಡ ಅಲ್ಲಿಗೆ ಆಗಾಗ್ಗೆ ಮಾತ್ರ ಭೇಟಿ ನೀಡುತ್ತಿರುತ್ತಾರೆ. ಹೀಗಾಗಿ ಪತ್ತೆಯಾದ ನಾಲ್ಕು ಪಟ್ಟೆ ತಲೆ ಹೆಬ್ಬಾತುಗಳನ್ನು ತಾವು ಸಾಕಿಲ್ಲ ಅಥವಾ ಹಿಡಿದಿಟ್ಟುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಮೈಸೂರಿನ ತೂಗುದೀಪ ಫಾರ್ಮ್‌ಹೌಸ್‌ನಲ್ಲಿ ಪಟ್ಟೆ ತಲೆ ಹೆಬ್ಬಾತುಗಳು ಪತ್ತೆಯಾದ ಹಿನ್ನೆಲೆ ಅರಣ್ಯಾಧಿಕಾರಿಗಳು ಟಿ. ನರಸೀಪುರ ನ್ಯಾಯಾಲಯಕ್ಕೆ ಖಾಸಗಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಟಿ. ನರಸೀಪುರ ನ್ಯಾಯಾಲಯವು ನಟ ದರ್ಶನ್, ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್‌ಹೌಸ್‌ನ ಉಸ್ತುವಾರಿ ನಾಗರಾಜ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ದರ್ಶನ್, ವಿಜಯಲಕ್ಷ್ಮಿ ಹಾಗೂ ನಾಗರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪಟ್ಟೆ ತಲೆ ಹೆಬ್ಬಾತುಗಳು ವನ್ಯಜೀವಿ ಸಂರಕ್ಷಣಾ ಕಾಯಿದೆಯ ಷೆಡ್ಯೂಲ್-1ರ ಪಟ್ಟಿಯಲ್ಲಿವೆ. ಇಂತಹ ಪಕ್ಷಿಗಳನ್ನು ಹಿಡಿದಿಟ್ಟುಕೊಳ್ಳುವುದು ಅಥವಾ ಸೆರೆಹಿಡಿಯುವುದು ಗಂಭೀರ ಅಪರಾಧವಾಗಿದ್ದು, ಕಾಯ್ದೆಯಡಿ ಜಾಮೀನು ರಹಿತ ಅಪರಾಧವಾಗಿದೆ. ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಗಂಭೀರ ಕಾನೂನು ಕ್ರಮ ಕೈಗೊಳ್ಳಲು ಅವಕಾಶವಿದೆ. ಇದೇ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಖಾಸಗಿ ದೂರು ದಾಖಲಿಸಿದ್ದರು.
ಇದನ್ನೂ ಓದಿ : ಸತತ 25 ಗಂಟೆಯಿಂದ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮುಂದುವರಿದ ED ಶೋಧ ; ಇಲ್ಲಿವರೆಗೂ ಏನೆಲ್ಲಾ ಸಿಕ್ತು?



















