ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಕುಟುಂಬಸ್ಥರಿಗೆ ಸೇರಿದ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆ 25 ಗಂಟೆಗೂ ಅಧಿಕ ಕಾಲ ಮುಂದುವರಿದಿದೆ.
ಬೆಂಗಳೂರಿನ ಸರ್ಕಾರಿ ನಿವಾಸದಲ್ಲೂ ಇ.ಡಿ ಅಧಿಕಾರಿಗಳ ಶೋಧ ಕಾರ್ಯಾಚರಣೆ ಇನ್ನೂ ಮುಂದುವರಿದಿದ್ದು, ನಿನ್ನೆ ಬೆಂಗಳೂರು, ಬೆಳಗಾವಿ ಸೇರಿದಂತೆ ಒಟ್ಟು 18 ಕಡೆಗಳಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ನಗದು, ಚಿನ್ನಾಭರಣಗಳು, ಆಸ್ತಿ ದಾಖಲೆ ಪತ್ರಗಳು, ಹೂಡಿಕೆ, ಹಣಕಾಸು ವ್ಯವಹಾರ, ಬ್ಯಾಂಕ್ ವಹಿವಾಟುಗಳಿಗೆ ಸಂಬಂಧಿಸಿ ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ಸ್ಥಳಗಳಲ್ಲಿ ನಿನ್ನೆಗೇ ಶೋಧ ಕಾರ್ಯಾಚರಣೆ ಪೂರ್ಣಗೊಳಿಸಿರುವ ಅಧಿಕಾರಿಗಳು, ಸದ್ಯ ಸತೀಶ್ ಜಾರಕಿಹೊಳಿ ಅವರ ಸರ್ಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರಿಗೆ ಸೇರಿದ ವಿವಿಧ ಮನೆಗಳು ಹಾಗೂ ಕಚೇರಿಗಳಲ್ಲಿ ಇ.ಡಿ ಅಧಿಕಾರಿಗಳಿಗೆ ಸಿಕ್ಕಿರುವ ಪ್ರಮುಖ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ದಾಖಲೆಗಳಿಗೆ ಸಂಬಂಧಿಸಿದಂತೆ ಇಂದು ಸತೀಶ್ ಜಾರಕಿಹೊಳಿ ಅವರನ್ನು ಮತ್ತೆ ವಿಚಾರಣೆ ನಡೆಸುವ ಸಾಧ್ಯತೆ ಇದ್ದು, ಬೆಳಗ್ಗೆ 9 ಗಂಟೆಯ ಬಳಿಕ ಸರ್ಕಾರಿ ನಿವಾಸದಲ್ಲೇ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ.
ನಿನ್ನೆ ಕೂಡ ಇ.ಡಿ ಅಧಿಕಾರಿಗಳು ಸಚಿವರನ್ನು ಇಡೀ ದಿನ ವಿಚಾರಣೆ ನಡೆಸಿದ್ದು, ತಡರಾತ್ರಿವರೆಗೂ ವಿಚಾರಣೆ ಮುಂದುವರಿದಿತ್ತು. ಇದರ ಜೊತೆಗೆ ಸರ್ಕಾರಿ ನಿವಾಸದಲ್ಲಿರುವ ದಾಖಲೆಗಳನ್ನೂ ಅಧಿಕಾರಿಗಳು ಪರಿಶೀಲಿಸಿದ್ದರು.
ಇನ್ನು ಇ.ಡಿ ದಾಳಿ ವಿಚಾರ ತಿಳಿದು ನಿನ್ನೆ ಸತೀಶ್ ಜಾರಕಿಹೊಳಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಸರ್ಕಾರಿ ನಿವಾಸದ ಬಳಿ ಜಮಾಯಿಸಿದ್ದರು. ರಾತ್ರಿ ವೇಳೆ ನಿವಾಸದ ಬಳಿ ಪ್ರತಿಭಟನೆಯನ್ನೂ ನಡೆಸಿದ್ದರು. ಇಂದು ಕೂಡ ಬೆಂಬಲಿಗರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಸರ್ಕಾರಿ ನಿವಾಸದ ಮುಂದೆ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಹೈಗ್ರೌಂಡ್ಸ್ ಠಾಣೆ ಪೊಲೀಸರು ಭದ್ರತೆ ನಿಯೋಜಿಸಿದ್ದು, ಹೆಚ್ಚುವರಿಯಾಗಿ ಎರಡು ಕೆಎಸ್‌ಆರ್‌ಪಿ ವಾಹನಗಳನ್ನೂ ಸ್ಥಳಕ್ಕೆ ತರಲಾಗಿದೆ.
ಇದನ್ನೂ ಓದಿ ; ಗಂಗೊಳ್ಳಿ ಪೊಲೀಸರಿಂದ ಅಮಾಯಕ ಆಟೋ ಚಾಲಕನಿಗೆ ಕಳ್ಳನ ಪಟ್ಟ ; ದೋಷಮುಕ್ತಗೊಳಿಸಿದ ಹೈಕೋರ್ಟ್



















