ಬೆಂಗಳೂರು : ಬಿಜೆಪಿ ಮುಖಂಡ, ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ಗೌರವಾಧ್ಯಕ್ಷ ಎನ್.ಆರ್. ರಮೇಶ್ ರಚಿಸಿರುವ ‘ಲೀಲಮ್ಮ ನಿನ್ನ ಗಂಡ ಯಾರಮ್ಮ?’ ಕೃತಿ ಹೊಸ ದಾಖಲೆ ನಿರ್ಮಿಸಿದೆ. ಮೊದಲ ಮುದ್ರಣ ಬಿಡುಗಡೆಯಾದ ಕೇವಲ 28 ದಿನಗಳಲ್ಲೇ ಕೃತಿ 10ನೇ ಮುದ್ರಣ ಕಂಡಿದ್ದು, ದಕ್ಷಿಣ ಭಾರತದಲ್ಲಿ ಅತಿ ಕಡಿಮೆ ಅವಧಿಯಲ್ಲಿ 10ನೇ ಮುದ್ರಣ ಕಂಡ ಪ್ರಪ್ರಥಮ ಕೃತಿ ಎಂಬ ಖ್ಯಾತಿಗೆ ಪಾತ್ರವಾಗಿದೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃತಿಯ 10ನೇ ಮುದ್ರಣವನ್ನು ಬಿಡುಗಡೆ ಮಾಡಲಾಯಿತು. ಈ ವೇಳೆ ಮಾತನಾಡಿದ ಕೃತಿಯ ಕರ್ತೃ ಎನ್.ಆರ್. ರಮೇಶ್, ಕನ್ನಡ ನಾಡು-ನುಡಿ, ನೆಲ-ಜಲ ಹಾಗೂ ಭಾಷೆಯ ಸೇವೆಗೆ ತಮ್ಮ ಬದುಕನ್ನು ಸಮರ್ಪಿಸಿಕೊಂಡಿದ್ದ ನಟಸಾರ್ವಭೌಮ ಡಾ. ರಾಜ್‌ಕುಮಾರ್ ಅವರ ಏಳಿಗೆ ಮತ್ತು ಜನಪ್ರಿಯತೆಯನ್ನು ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ಚಾರಿತ್ರ್ಯವಧೆಗೆ ಮುಂದಾಗಿ ಹಲವು ರೀತಿಯ ಗೊಂದಲಗಳನ್ನು ಸೃಷ್ಟಿಸಿದ್ದರು. ಈ ವಿವಾದಗಳಿಗೆ ಸರ್ಕಾರಿ ದಾಖಲೆಗಳ ಸಹಿತ ತೆರೆ ಎಳೆಯುವ ಉದ್ದೇಶದಿಂದ ಕೃತಿ ರಚಿಸಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಕೃತಿಯ ಕೊನೆಯ 20 ಪುಟಗಳಲ್ಲಿ ದಿವಂಗತ ನಟಿ ಲೀಲಾವತಿ ಹಾಗೂ ನಟ ವಿನೋದ್ ರಾಜ್ ಅವರ ಸ್ವತ್ತುಗಳಿಗೆ ಸಂಬಂಧಿಸಿದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಸೇರಿಸಲಾಗಿದೆ ಎಂದು ಹೇಳಿದರು. ಕೃತಿಗೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶೀಘ್ರದಲ್ಲೇ 11ನೇ ಹಾಗೂ 12ನೇ ಮುದ್ರಣವನ್ನೂ ಕಾಣುವ ನಿರೀಕ್ಷೆಯಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೃತಿಯ 10ನೇ ಮುದ್ರಣ ಬಿಡುಗಡೆಯಾದ ಸಂದರ್ಭದಲ್ಲೇ ಮಾಗಡಿ ರಸ್ತೆಯ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಸದಸ್ಯರು ಹಾಗೂ ಕೃಷ್ಣರಾಜಪುರದ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘದ ಸದಸ್ಯರು ಸ್ಥಳದಲ್ಲೇ 10ನೇ ಮುದ್ರಣದ ಎಲ್ಲಾ ಪ್ರತಿಗಳನ್ನು ಖರೀದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸೋಮಣ್ಣ, ಹೊನ್ನೇಗೌಡ, ಉಮೇಶ್ ಹಾಗೂ ಡಾ. ರಾಜ್‌ಕುಮಾರ್ ಸೇನೆಯ ತ್ಯಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ನಾಳೆ ಡಿಕೆಶಿ ಸರ್ಕಾರದ 100 ದಿನಗಳ ಸಾಧನಾ ಸಮಾವೇಶ ; ಬಿಜೆಪಿ ಪಾದಯಾತ್ರೆಗೆ ಟಕ್ಕರ್ ಕೊಡಲು ಸಿದ್ಧತೆ !


















