ಬೆಂಗಳೂರು : ನೀವು ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್.ಡಿ.ಎಫ್.ಸಿ ಬ್ಯಾಂಕಿನಲ್ಲಿ ಸಾಲ ಪಡೆದಿದ್ದೀರಾ? ಗೃಹ ಸಾಲ, ವಾಹನ ಸಾಲ ಅಥವಾ ವೈಯಕ್ತಿಕ ಸಾಲದ ಇಎಂಐ ಪಾವತಿಸುತ್ತಿದ್ದೀರಾ? ಹಾಗಾದರೆ, ಬ್ಯಾಂಕ್ ನಿಮಗೊಂದು ಸಿಹಿ ಸುದ್ದಿ ನೀಡಿದೆ. ಎಚ್.ಡಿ.ಎಫ್.ಸಿಯು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್-ಬೇಸ್ಡ್ ಲೆಂಡಿಂಗ್ ರೇಟ್ (MCLR)ಅನ್ನು ಇಳಿಕೆ ಮಾಡಿದ್ದು, ಇದರಿಂದ ಇಎಂಐ ಹೊರೆಯಲ್ಲಿ ಸ್ವಲ್ಪ ಇಳಿಕೆಯಾಗಲಿದೆ.
ಎಂಸಿಎಲ್ಆರ್ ಆಧಾರಿತ ಸಾಲದ ಬಡ್ಡಿದರಗಳನ್ನು ವಿವಿಧ ಅವಧಿಗಳಿಗೆ 5 ರಿಂದ 10 ಬೇಸಿಸ್ ಪಾಯಿಂಟ್ಗಳವರೆಗೆ (0.05% – 0.10%) ಕಡಿಮೆ ಮಾಡಿದೆ. ಈ ಪರಿಷ್ಕೃತ ದರಗಳು ಸೆಪ್ಟೆಂಬರ್ 7ರಿಂದ ಜಾರಿಗೆ ಬಂದಿವೆ. ಈ ದರ ಕಡಿತದಿಂದಾಗಿ ಎಂಸಿಎಲ್ ಆರ್ ಗೆ ಲಿಂಕ್ ಆಗಿರುವ ಗೃಹ ಸಾಲ, ವಾಹನ ಸಾಲ ಮತ್ತು ವೈಯಕ್ತಿಕ ಸಾಲ ಪಡೆದ ಹಳೆಯ ಗ್ರಾಹಕರ ಮಾಸಿಕ ಕಂತಿನ ಮೊತ್ತ ಕಡಿಮೆಯಾಗಲಿದೆ.
ಎಂಸಿಎಲ್ ಆರ್ ಅನ್ವಯ ಒಂದರಿಂದ ಆರು ತಿಂಗಳ ಅವಧಿಗೆ ಸಾಲ ಪಡೆದವರಿಗೆ 10 ಬೇಸಿಸ್ ಪಾಯಿಂಟ್ ಕಡಿಮೆ ಮಾಡಲಾಗಿದೆ. 1 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಸಾಲ ಪಡೆದವರಿಗೆ 5 ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡಲಾಗಿದೆ. ಆದಾಗ್ಯೂ, ರೆಪೊ ದರಕ್ಕೆ ಲಿಂಕ್ ಆಗಿರುವ ಹೊಸ ಸಾಲಗಾರರಿಗೆ ಈ ಎಂಸಿಎಲ್ ಆರ್ ಕಡಿತದಿಂದ ತಕ್ಷಣಕ್ಕೆ ಯಾವುದೇ ಬದಲಾವಣೆ ಇರುವುದಿಲ್ಲ.
ಮಧ್ಯಪ್ರಾಚ್ಯ ಸಂಘರ್ಷ ಸೇರಿ ಹಲವು ಕಾರಣಗಳಿಂದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂತಹ ಹೊತ್ತಿನಲ್ಲೂ ಎಚ್.ಡಿ.ಎಫ್.ಸಿ ಬ್ಯಾಂಕ್ ಎಂಸಿಎಲ್ ಆರ್ ಬಡ್ಡಿದರವನ್ನು ಇಳಿಕೆ ಮಾಡಿರುವುದು ಸಕಾರಾತ್ಮಕ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ದೆಹಲಿ ಕಟ್ಟಡ ದುರಂತ ತೆರೆದಿಟ್ಟ ಭಾರತೀಯ ವಿದ್ಯಾರ್ಥಿ ನಿಲಯಗಳ ಭೀಕರ ವಾಸ್ತವ!


















