ಬೆಂಗಳೂರು : ಇಂದು ಬೆಳ್ಳಂಬೆಳಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಯಶವಂತಪುರದಲ್ಲಿರುವ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದ್ದಾರೆ. ಈರುಳ್ಳಿ ಮಂಡಿಗೆ ತೆರಳಿದ ಅವರು, ಸ್ಥಳೀಯ ವರ್ತಕರು, ರೈತರು ಹಾಗೂ ಕೂಲಿ ಕಾರ್ಮಿಕರೊಂದಿಗೆ ಕುಳಿತು ಅವರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಈ ವೇಳೆ ರೈತರು ಮಾರುಕಟ್ಟೆಯಲ್ಲಿ ತಮಗೆ ಎದುರಾಗುತ್ತಿರುವ ವಿವಿಧ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು, ಕೃಷಿ ಸಚಿವರು ಮಾರುಕಟ್ಟೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಆಲಿಸುತ್ತಿಲ್ಲ ಎಂದು ರೈತರು ಸಿಎಂಗೆ ದೂರಿದ್ದಾರೆ.
ರೈತರ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಡಿ.ಕೆ. ಶಿವಕುಮಾರ್, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದ್ದಾರೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆಯ ಸುಗಮ ಕಾರ್ಯನಿರ್ವಹಣೆ ಹಾಗೂ ರೈತರ ಹಿತಾಸಕ್ತಿಗಳನ್ನು ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಬಳಿಕ ಮುಖ್ಯಮಂತ್ರಿಗಳ ಭೇಟಿಯಿಂದ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ಮೂಡಿದೆ ಎಂದು ರೈತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾರುಕಟ್ಟೆ ಪರಿಶೀಲನೆ ವೇಳೆ ರಸ್ತೆ ಬದಿಯ ಸಣ್ಣ ಪೆಟ್ಟಿಗೆ ಹೋಟೆಲ್‌ಗೆ ತೆರಳಿದ ಡಿ.ಕೆ. ಶಿವಕುಮಾರ್, ಕೂಲಿ ಕಾರ್ಮಿಕರೊಂದಿಗೆ ಕುಳಿತು ಇಡ್ಲಿ ಸೇವಿಸಿದ್ದಾರೆ.
ಇದನ್ನೂ ಓದಿ : ಶಿವಶಂಕರಪ್ಪ ಮನೆ ಮೇಲೆ CID ರೇಡ್ ; ಯಾವ ಕ್ಷಣದಲ್ಲಾದ್ರೂ ಅರೆಸ್ಟ್ ಸಾಧ್ಯತೆ!


















