ಬೆಂಗಳೂರು: ಫೇಸ್ ಬುಕ್, ವಾಟ್ಸ್ ಆ್ಯಪ್ ಹಾಗೂ ಇನ್ ಸ್ಟಾಗ್ರಾಂ ಮಾತೃಸಂಸ್ಥೆ ಆಗಿರುವ ಮೆಟಾ ಈಗ ವಾಟ್ಸ್ ಆ್ಯಾಪ್ ಬಳಕೆದಾರರಿಗೆ ಸಿಹಿ ಸುದ್ದಿಯನ್ನು ನೀಡಿದೆ. ಬಳಕೆದಾರರು ವಾಟ್ಸ್ ಆ್ಯಪ್ ಬಳಕೆದಾರರು ಅಪ್ಲಿಕೇಶನ್ ಮೂಲಕವೇ ತಮ್ಮ ಮನೆಯ ವಿದ್ಯುತ್, ನೀರು, ಗ್ಯಾಸ್, ಫಾಸ್ಟ್ಯಾಗ್, ಇನ್ಶೂರೆನ್ಸ್ ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಸೇರಿದಂತೆ ವಿವಿಧ ದೈನಂದಿನ ಪಾವತಿಗಳನ್ನು (Utility Bills) ಮಾಡಬಹುದಾಗಿದೆ.
ಭಾರತ್ ಕನೆಕ್ಟ್ (BBPS – Bharat Connect) ನೆಟ್ ವರ್ಕ್ ಬೆಂಬಲದೊಂದಿಗೆ ಹೊಸ ಫೀಚರ್ ಪರಿಚಯಿಸಲಾಗಿದ್ದು, 30ಕ್ಕೂ ಅಧಿಕ ವಿಭಾಗಗಳಲ್ಲಿ ಬಿಲ್ ಪಾವತಿಸಬಹುದು. ಗ್ರಾಹಕರು ವಿವಿಧ ಬಿಲ್ ಪಾವತಿಸಲು ಬೇರೆ ಬೇರೆ ಆ್ಯಪ್ ಬಳಸುವ ಬದಲಾಗಿ, ಒಂದೇ ಆ್ಯಪ್ ನಲ್ಲಿ ಯುಟಿಲಿಟಿ ಬಿಲ್ ಪಾವತಿಸಲು ಇದು ಸಹಕಾರಿಯಾಗಲಿದೆ.
ಹೊಸ ಫೀಚರ್ ಮೂಲಕ ಹಳೆಯ ಬಿಲ್ ಪಾವತಿಗಳ ಹಿಸ್ಟರಿ ನೋಡಬಹುದು. ಆ್ಯಂಡ್ರಾಯ್ಡ್ ಹಾಗೂ ಐಒಎಸ್ ನ ಎಲ್ಲ ಬಳಕೆದಾರರಿಗೆ ಮುಂಬರುವ ವಾರಗಳಲ್ಲಿ ಹಂತ ಹಂತವಾಗಿ ಈ ಸೌಲಭ್ಯ ಲಭ್ಯವಾಗಲಿದೆ. ಹೊಸ ಫೀಚರ್ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ವಾಟ್ಸ್ ಆ್ಯಪ್ ಮೂಲಕ ಬೇರೆಯವರಿಗೆ ಯುಪಿಐನಿಂದ ಹಣ ಕಳುಹಿಸುವ ಫೀಚರ್ ನೀಡಲಾಗಿದೆ. ಹಾಗಾಗಿ, ಸುಲಭವಾಗಿ ಯುಪಿಐ ಮೂಲಕ ಬಿಲ್ ಪಾವತಿಸಬಹುದಾಗಿದೆ.
ಬಿಲ್ ಪಾವತಿಸುವುದು ಹೇಗೆ?
• ವಾಟ್ಸ್ ಆ್ಯಪ್ ಓಪನ್ ಮಾಡಿ, ಹೋಮ್ ಸ್ಕ್ರೀನ್ ಮೇಲ್ಭಾಗದಲ್ಲಿರುವ ₹ (ರೂಪಾಯಿ) ಐಕಾನ್ ಮೇಲೆ ಕ್ಲಿಕ್ ಮಾಡಿ.
• ನಿಮಗೆ ಬೇಕಾದ ಬಿಲ್ ವಿಭಾಗ (ವಿದ್ಯುತ್, ನೀರು, ಫಾಸ್ಟ್ಯಾಗ್ ಇತ್ಯಾದಿ) ಆಯ್ಕೆಮಾಡಿ.
• ನಿಮ್ಮ ಖಾತೆಯ ವಿವರಗಳನ್ನು ನಮೂದಿಸಿ ಹಾಗೂ ಬಿಲ್ ಮೊತ್ತವನ್ನು ಪರಿಶೀಲಿಸಿ.
• ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಯನ್ನು ಪೂರ್ಣಗೊಳಿಸಿ.



















