ನವದೆಹಲಿ: ಬಲಪಂಥೀಯ ಇನ್‌ಫ್ಲೂಯೆನ್ಸರ್, ಹಿಂದುತ್ವ ಪ್ರತಿಪಾದಕ ಸ್ವತಂತ್ರ ಭಾರದ್ವಾಜ್ ವಿರುದ್ಧ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ದೆಹಲಿ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಜುಲೈನಲ್ಲಿ ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ(ಕಾಕ್ರೋಚ್ ಜನತಾ ಪಾರ್ಟಿ) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿಯ ತಂದೆಯ ಮೇಲೆ ತೀವ್ರ ಹಲ್ಲೆ ನಡೆಸಿ, ತಲೆಬುರುಡೆ ಒಡೆದಿದ್ದಾಗಿ ಸಂದರ್ಶನವೊಂದರಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದ ಭಾರದ್ವಾಜ್, ಈ ಕೃತ್ಯದ ಬಳಿಕ ಕಾನೂನಿನಿಂದ ಬಚಾವಾಗಲು ಚಿರಾಗ್ ಪಾಸ್ವಾನ್ ಸೇರಿದಂತೆ ಹಲವು ರಾಜಕಾರಣಿಗಳು ನನಗೆ ನೆರವಾದರು ಎಂದು ಇತ್ತೀಚೆಗೆ ವಿಡಿಯೋ ಮಾಡಿ ಹೇಳಿಕೆ ನೀಡಿದ್ದ.
ಹೆಸರು ದುರ್ಬಳಕೆಗೆ ಚಿರಾಗ್ ಪಾಸ್ವಾನ್ ಆಕ್ಷೇಪ
ತಮ್ಮ ಮತ್ತು ತಮ್ಮ ಪಕ್ಷದ ಹೆಸರನ್ನು ಅನಗತ್ಯವಾಗಿ ಬಳಸಿಕೊಂಡಿರುವುದನ್ನು ತೀವ್ರವಾಗಿ ಖಂಡಿಸಿರುವ ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್, “ಸಾರ್ವಜನಿಕ ಜೀವನದಲ್ಲಿ ನಮ್ಮನ್ನು ಅನೇಕ ಜನರು ಭೇಟಿಯಾಗುತ್ತಾರೆ, ಫೋಟೋ ತೆಗೆದುಕೊಳ್ಳುತ್ತಾರೆ. ಆದರೆ, ಅದರ ಆಧಾರದ ಮೇಲೆ ತಮ್ಮನ್ನು ವೈಯಕ್ತಿಕ ಪರಿಚಿತರು ಎಂದು ಹೇಳಿಕೊಳ್ಳುವುದು ನಮ್ಮ ಹೆಸರಿನ ದುರ್ಬಳಕೆಯಾಗುತ್ತದೆ. ದಾಳಿಕೋರ ತನ್ನ ಮೇಲಿನ ಕ್ರಮದಿಂದ ತಪ್ಪಿಸಿಕೊಳ್ಳಲು ನನ್ನ ಮತ್ತು ನನ್ನ ಪಕ್ಷದ ಬೆಂಬಲವಿದೆ ಎಂದು ಬಿಂಬಿಸಲು ಯತ್ನಿಸಿದ್ದಾನೆ” ಎಂದು ಸ್ಪಷ್ಟಪಡಿಸಿದ್ದಾರೆ.
ಕಠಿಣ ಕ್ರಮಕ್ಕೆ ಸಚಿವರ ಆಗ್ರಹ
ಬಹಿರಂಗವಾಗಿ ಹಲ್ಲೆಯ ಕೃತ್ಯವನ್ನು ಒಪ್ಪಿಕೊಂಡು, ಜೀವ ತೆಗೆಯುವ ರೀತಿಯಲ್ಲಿ ಹಲ್ಲೆ ಮಾಡಿದ್ದೇನೆ ಎಂದು ಗರ್ವದಿಂದ ಹೇಳಿಕೊಳ್ಳುವುದು ಅಪಾಯಕಾರಿ ಪ್ರವೃತ್ತಿ ಎಂದಿರುವ ಪಾಸ್ವಾನ್, ಇಂತಹ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳದಿದ್ದರೆ ದೇಶಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ. ಈ ಪ್ರಕರಣದಲ್ಲಿ ನಿಷ್ಪಕ್ಷ ತನಿಖೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಬೆಂಬಲ ಸೂಚನೆ
ಹಲ್ಲೆಗೊಳಗಾದ ಸಂತ್ರಸ್ತ ವ್ಯಕ್ತಿಯ ಕುಟುಂಬಕ್ಕೆ ತಮ್ಮ ಹಾಗೂ ತಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದೂ ಪಾಸ್ವಾನ್ ಭರವಸೆ ನೀಡಿದ್ದಾರೆ. “ನಾವು ಸಂತ್ರಸ್ತರ ಪರವಾಗಿ ನಿಲ್ಲುತ್ತೇವೆ. ಅವರಿಗೆ ನ್ಯಾಯ ಕೊಡಿಸುವುದು ನಮ್ಮ ಹೊಣೆ. ಕಾನೂನನ್ನು ಅಣಕಿಸುವ ವ್ಯಕ್ತಿಗೆ ಸೂಕ್ತ ಶಿಕ್ಷೆಯಾಗುವಂತೆ ನೋಡಿಕೊಳ್ಳುತ್ತೇವೆ” ಎಂದು ಪಾಸ್ವಾನ್ ಹೇಳಿದ್ದಾರೆ.
ಪೊಲೀಸ್ ವಶಕ್ಕೆ ಸ್ವತಂತ್ರ ಭಾರದ್ವಾಜ್
ವಿಡಿಯೋ ವೈರಲ್ ಬೆನ್ನಲ್ಲೇ ಸಂಸತ್ ಭವನ ಪೊಲೀಸ್ ಠಾಣೆ ಎದುರು ಸಿಜೆಪಿ ಕಾರ್ಯಕರ್ತರು, ಸಂಸದರಾದ ಚಂದ್ರಶೇಖರ್ ಆಜಾದ್ ಮತ್ತು ಪಪ್ಪು ಯಾದವ್ ಅವರೊಂದಿಗೆ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಉತ್ತರ ಪ್ರದೇಶದಲ್ಲಿ ಸ್ವತಂತ್ರ ಭಾರದ್ವಾಜ್‌ನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



















