ದುಬೈ : ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಏಷ್ಯಾ ಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಥಾಯ್ಲೆಂಡ್ ವಿರುದ್ಧ ಭಾರತದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಆಕರ್ಷಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿರುವ ಸ್ಮೃತಿ, ಈ ಪಂದ್ಯದಲ್ಲಿ ನ್ಯೂಜಿಲೆಂಡ್ನ ಅನುಭವಿ ಆಟಗಾರ್ತಿ ಸೂಜಿ ಬೇಟ್ಸ್ ಅವರನ್ನು ಹಿಂದಿಕ್ಕುವ ಮೂಲಕ, ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಮಹಿಳಾ ಏಷ್ಯಾ ಕಪ್ನ ಈ ಪಂದ್ಯಕ್ಕೂ ಮುನ್ನ ಸ್ಮೃತಿ ಮಂಧಾನ ಅವರು ಈ ಸಾಧನೆ ಮಾಡಲು ಕೆಲವೇ ರನ್ಗಳ ಅಂತರದಲ್ಲಿದ್ದರು. ಭಾರತೀಯ ವನಿತೆಯರ ತಂಡದ ಇನ್ನಿಂಗ್ಸ್ ಆರಂಭಿಸಿದ ಮಂಧಾನ ಮತ್ತು ಶಫಾಲಿ ವರ್ಮಾ ಜೋಡಿ ಉತ್ತಮ ಆರಂಭವನ್ನೇ ಒದಗಿಸಿತು. ಪಂದ್ಯದಲ್ಲಿ ಬಿರುಸಿನ ಆಟವಾಡಿದ ಮಂಧಾನ, 10 ಎಸೆತಗಳಲ್ಲಿ ೪ ಆಕರ್ಷಕ ಬೌಂಡರಿಗಳ ನೆರವಿನಿಂದ 19 ರನ್ ಗಳಿಸಿ ಮಿಂಚಿದರು.
ದುರದೃಷ್ಟವಶಾತ್, ಮೂರನೇ ಓವರ್ನ ಕೊನೆಯ ಎಸೆತದಲ್ಲಿ ಅಫಿಸಾರಾ ಸುವಾಂಚೋನ್ರತಿ ಅವರ ಅದ್ಭುತ ಫೀಲ್ಡಿಂಗ್ನಿಂದಾಗಿ ಮಂಧಾನ ರನೌಟ್ ಆಗಿ ಪೆವಿಲಿಯನ್ ಸೇರಬೇಕಾಯಿತು. ಆದರೆ, ಈ ಸಣ್ಣ ಇನಿಂಗ್ಸ್ನಲ್ಲೇ ಅವರು ಸೂಜಿ ಬೇಟ್ಸ್ ಅವರ ದಾಖಲೆಯನ್ನು ಮುರಿದು, ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ವಿಶ್ವದ ಎರಡನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಿಥಾಲಿ ರಾಜ್ ದಾಖಲೆ ಮುರಿಯುವತ್ತ ಮಂಧಾನ ಚಿತ್ತ
ಪ್ರಸ್ತುತ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕಿ ಹಾಗೂ ಲೆಜೆಂಡರಿ ಆಟಗಾರ್ತಿ ಮಿಥಾಲಿ ರಾಜ್ ಮೊದಲ ಸ್ಥಾನದಲ್ಲಿದ್ದಾರೆ. ಮಿಥಾಲಿ ಒಟ್ಟಾರೆ 10,868 ರನ್ಗಳನ್ನು ಕಲೆಹಾಕಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದೀಗ 10,750 ರನ್ಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಸ್ಮೃತಿ ಮಂಧಾನ, ಮಿಥಾಲಿ ರಾಜ್ ಅವರ ಈ ಬೃಹತ್ ದಾಖಲೆಯನ್ನು ಮುರಿಯಲು ಕೇವಲ ೧೧೮ ರನ್ಗಳ ಹಿಂದಿದ್ದಾರೆ. ಮುಂಬರುವ ಪಂದ್ಯಗಳಲ್ಲಿ ಮಂಧಾನ ಈ ದಾಖಲೆಯನ್ನೂ ಅಳಿಸಿಹಾಕಿ, ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಮೊದಲ ಆಟಗಾರ್ತಿಯಾಗಿ ಹೊರಹೊಮ್ಮುವ ಎಲ್ಲಾ ಅವಕಾಶಗಳೂ ಇವೆ.
ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಆಟಗಾರ್ತಿಯರು
- ಮಿಥಾಲಿ ರಾಜ್ (ಭಾರತ) – 10,868 ರನ್ಗಳು
- ಸ್ಮೃತಿ ಮಂಧಾನ (ಭಾರತ) -10,750 ರನ್ಗಳು
- ಸೂಜಿ ಬೇಟ್ಸ್ (ನ್ಯೂಜಿಲೆಂಡ್) – 10,740 ರನ್ಗಳು
- ಚಾರ್ಲೊಟ್ ಎಡ್ವರ್ಡ್ಸ್ (ಇಂಗ್ಲೆಂಡ್) – 10,273 ರನ್ಗಳು
- ಸ್ಟಫಾನಿ ಟೇಲರ್ (ವೆಸ್ಟ್ ಇಂಡೀಸ್) – 10,007 ರನ್ಗಳು
ಇದನ್ನೂ ಓದಿ ; IPL 2027ಕ್ಕೂ ಮುನ್ನ CSK ಮತ್ತು ಧೋನಿ ನಡುವೆ ಒಡೆತನದ ಬಿಕ್ಕಟ್ಟು : ಹಳದಿ ಪಡೆಯಲ್ಲಿ ‘ತಲಾ’ ಶಕೆ ಅಂತ್ಯ?


















