ಬೆಂಗಳೂರು : ನಗರದಲ್ಲಿರುವ ಜನರ ಆರೋಗ್ಯದ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿರುವ ಎಲ್ಲಾ ಹೋಟೆಲ್, ಬೇಕರಿ ಹಾಗೂ ಕಂಡಿಮೆಂಟ್‌ಗಳ ಸ್ವಚ್ಛತೆ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಪರಿಶೀಲಿಸಲು ಮುಖ್ಯ ಆರೋಗ್ಯಾಧಿಕಾರಿಗಳು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ.
ಬೆಂಗಳೂರು ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಆಹಾರ ಉದ್ದಿಮೆಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿ, ಸ್ವಚ್ಛತೆ ಕಾಪಾಡದ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಹೋಟೆಲ್‌ಗಳ ಅಡುಗೆಮನೆ, ಆಹಾರ ತಯಾರಿಸುವ ಸ್ಥಳ, ಪಾತ್ರೆಗಳು, ನೀರಿನ ಮೂಲ, ಆಹಾರ ಸಂಗ್ರಹಣಾ ಕೊಠಡಿ, ಊಟದ ಸ್ಥಳ ಹಾಗೂ ಶೌಚಾಲಯಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಸೋಂಕು ನಿವಾರಕ ದ್ರವ್ಯಗಳಿಂದ ಶುಚಿಗೊಳಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಆಹಾರ ಪದಾರ್ಥಗಳನ್ನು ಮುಚ್ಚಿ ಸುರಕ್ಷಿತ ತಾಪಮಾನದಲ್ಲಿ ಹಾಗೂ ನಿಗದಿತ ಅವಧಿಯೊಳಗೆ ಸಂಗ್ರಹಿಸಬೇಕು. ಆಹಾರ ತಯಾರಿಸುವ ಮತ್ತು ಪೂರೈಸುವ ಸಿಬ್ಬಂದಿ ವೈಯಕ್ತಿಕ ಸ್ವಚ್ಛತೆ, ಕೈತೊಳೆಯುವ ಅಭ್ಯಾಸ, ಸ್ವಚ್ಛ ಉಡುಪು ಹಾಗೂ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿದೆ. ಅಲ್ಲದೆ, ಕಲುಷಿತ ನೀರು, ಅವಧಿ ಮೀರಿದ ಆಹಾರ ಪದಾರ್ಥಗಳು, ಕೀಟಗಳು ಹಾಗೂ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಹೋಟೆಲ್ ಆವರಣದಲ್ಲಿ ಇರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ಗ್ರಾಹಕರಿಗೆ ಸುರಕ್ಷಿತ ಹಾಗೂ ಆರೋಗ್ಯಕರ ಆಹಾರ ಮತ್ತು ವಾತಾವರಣ ಒದಗಿಸುವುದು ಪ್ರತಿಯೊಂದು ಆಹಾರ ಉದ್ದಿಮೆಯ ಜವಾಬ್ದಾರಿಯಾಗಿದೆ ಎಂದು ಜಿಬಿಎ ಸ್ಪಷ್ಟಪಡಿಸಿದೆ.
ನಿಯಮ ಉಲ್ಲಂಘಿಸುವ ಹೋಟೆಲ್‌ಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡುವಂತೆಯೂ ಐದು ನಗರ ಪಾಲಿಕೆಗಳ ಅಧಿಕಾರಿಗಳಿಗೆ ಮುಖ್ಯ ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ ಜಿಬಿಎ ಕೈಗೊಂಡಿರುವ ಈ ಕ್ರಮ ಮಹತ್ವ ಪಡೆದುಕೊಂಡಿದ್ದು, ಬೇಕರಿ, ಹೋಟೆಲ್ ಮತ್ತು ಕಂಡಿಮೆಂಟ್‌ಗಳ ಮೇಲೆ ಶೀಘ್ರದಲ್ಲೇ ವ್ಯಾಪಕ ತಪಾಸಣೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : KPSC ನೇಮಕಾತಿ ಹಗರಣಕ್ಕೆ ಬಿಗ್ ಟ್ವಿಸ್ಟ್ ; ಮಧ್ಯವರ್ತಿ ಬಸವರಾಜ್ ಕನ್ನಾಳೆ ಬಂಧನ!



















