ಬೆಂಗಳೂರು : ಪೌರಕಾರ್ಮಿಕರಿಗೆ ನೀಡಿರುವ ಬೋನಸ್ ಹಣದಲ್ಲಿ ಕಮಿಷನ್ ಅಥವಾ ಪಾಲು ಕೇಳುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸೂಚನೆ ನೀಡಿದೆ.
ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಹಾಗೂ ಪೌರಕಾರ್ಮಿಕರ ದಿನಾಚರಣೆ ಹಿನ್ನೆಲೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಪೌರಕಾರ್ಮಿಕರು ಹಾಗೂ ‘ಡಿ’ ಗ್ರೂಪ್ ನೌಕರರಿಗೆ ತಲಾ 22 ಸಾವಿರ ಬೋನಸ್ ನೀಡಲು ರಾಜ್ಯ ಸರ್ಕಾರ ಆದೇಶಿಸಿತ್ತು.
ಈ ಹಣವನ್ನು ತಾವೇ ಮಂಜೂರು ಮಾಡಿಸಿಕೊಟ್ಟಿರುವುದಾಗಿ ಹೇಳಿಕೊಂಡು ಕೆಲ ಸಂಘ-ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳು ಪೌರಕಾರ್ಮಿಕರಿಂದ ಕಮಿಷನ್ ವಸೂಲಿ ಮಾಡುತ್ತಿರುವುದು ಜಿಬಿಎ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಜಿಬಿಎ ಜಂಟಿ ಆಯುಕ್ತರು (ಆಡಳಿತ) ಎಲ್ಲಾ ‘ಬಟವಾಡೆ ಅಧಿಕಾರಿಗಳಿಗೆ’ ಸುತ್ತೋಲೆ ಹೊರಡಿಸಿದ್ದಾರೆ.
ಯಾವುದೇ ಸಂಘ-ಸಂಸ್ಥೆಗಳ ನಾಯಕರು ಅಥವಾ ಖಾಸಗಿ ವ್ಯಕ್ತಿಗಳಿಗೆ ಬೋನಸ್ ಹಣದಲ್ಲಿ ಕಮಿಷನ್ ಅಥವಾ ಪಾಲು ನೀಡದಂತೆ ಪೌರಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು. ಬೋನಸ್ ಹಣಕ್ಕೆ ಕಮಿಷನ್ ಬೇಡಿಕೆ ಇಡುವುದು ಅಥವಾ ವಸೂಲಿ ಮಾಡುವುದು ಕಂಡುಬಂದರೆ, ಅಂತಹ ವ್ಯಕ್ತಿಗಳು ಅಥವಾ ಸಂಘಟನೆಗಳ ವಿರುದ್ಧ ತಕ್ಷಣ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಪೌರಕಾರ್ಮಿಕರಿಗೆ ಸರ್ಕಾರ ನೀಡಿರುವ ಸಂಪೂರ್ಣ ಬೋನಸ್ ಹಣ ಯಾವುದೇ ಕಡಿತವಿಲ್ಲದೆ ತಲುಪುವಂತೆ ಖಚಿತಪಡಿಸಿಕೊಳ್ಳಲು ಜಿಬಿಎ ಕ್ರಮ ಕೈಗೊಂಡಿದೆ ಎಂದು ಜಿಬಿಎ ಆಡಳಿತ ವಿಭಾಗದ ಜಂಟಿ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ : ಹಿರಿಯೂರು ಬಳಿ ಖಾಸಗಿ ಬಸ್ ಪಲ್ಟಿ – ಇಬ್ಬರು ಸ್ಥಳದಲ್ಲೇ ದುರ್ಮರಣ!



















