ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ 2026-27ರ ಸಾಲಿನ ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಚೆನ್ನೈಗೆ ಸ್ಥಳಾಂತರಿಸಿದೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಮೈದಾನದಲ್ಲಿ ನಡೆಯಬೇಕಿದ್ದ ಈ ಮಹತ್ವದ ಪಂದ್ಯವನ್ನು ಅಭಿಮಾನಿಗಳಿಗೆ ವೀಕ್ಷಿಸಲು ಅನುಕೂಲವಾಗುವಂತೆ ಚೆನ್ನೈನ ಎಂ.ಎ ಚಿದಂಬರಂ ಕ್ರೀಡಾಂಗಣಕ್ಕೆ (ಚೆಪಾಕ್) ಶಿಫ್ಟ್ ಮಾಡಲಾಗಿದೆ.
ಸೆಪ್ಟೆಂಬರ್ 6 ರಿಂದ 10 ರವರೆಗೆ ಐದು ದಿನಗಳ ಕಾಲ ಫೈನಲ್ ಪಂದ್ಯ ನಡೆಯಲಿದೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (CoE) ಕ್ಯಾಂಪಸ್‌ನಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಗಳಿರುವ ಕಾರಣ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, “ದುಲೀಪ್ ಟ್ರೋಫಿ ಅತ್ಯಂತ ಮಹತ್ವದ ದೇಶೀಯ ಟೂರ್ನಿಯಾಗಿದೆ. ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲಿ ಕುಳಿತು ಲೈವ್ ಆಗಿ ವೀಕ್ಷಿಸುವ ಅವಕಾಶವನ್ನು ಅಭಿಮಾನಿಗಳಿಗೆ ನೀಡಬೇಕು ಎನ್ನುವುದು ನಮ್ಮ ಉದ್ದೇಶ. CoE ನಲ್ಲಿ ಪ್ರೇಕ್ಷಕರಿಗೆ ನಿರ್ಬಂಧವಿರುವುದರಿಂದ ಫೈನಲ್ ಪಂದ್ಯವನ್ನು ಚೆನ್ನೈಗೆ ಸ್ಥಳಾಂತರಿಸುವುದು ಸೂಕ್ತವೆಂದು ನಾವು ಭಾವಿಸಿದ್ದೇವೆ” ಎಂದು ತಿಳಿಸಿದ್ದಾರೆ.
ಕ್ವಾರ್ಟರ್ ಫೈನಲ್, ಸೆಮಿ-ಫೈನಲ್ ಪಂದ್ಯಗಳು ಬೆಂಗಳೂರಲ್ಲೇ!
ಫೈನಲ್ ಪಂದ್ಯ ಚೆನ್ನೈಗೆ ಶಿಫ್ಟ್ ಆಗಿದ್ದರೂ, ಟೂರ್ನಿಯ ಕ್ವಾರ್ಟರ್ ಫೈನಲ್ ಮತ್ತು ಸೆಮಿ-ಫೈನಲ್ ಪಂದ್ಯಗಳು ನಿಗದಿಯಂತೆ ಬೆಂಗಳೂರಿನ CoE ಕ್ಯಾಂಪಸ್‌ನಲ್ಲೇ ನಡೆಯಲಿವೆ. ಈ ಪಂದ್ಯಗಳಿಗೂ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆಗಸ್ಟ್ 23 ರಂದು ಕ್ವಾರ್ಟರ್ ಫೈನಲ್ ಪಂದ್ಯಗಳೊಂದಿಗೆ ಟೂರ್ನಿ ಆರಂಭವಾಗಲಿದ್ದು, ಈಸ್ಟ್ ಝೋನ್ ವಿರುದ್ಧ ನಾರ್ತ್ ಈಸ್ಟ್ ಝೋನ್ ಹಾಗೂ ನಾರ್ತ್ ಝೋನ್ ವಿರುದ್ಧ ವೆಸ್ಟ್ ಝೋನ್ ಸೆಣಸಲಿವೆ. ಆಗಸ್ಟ್ 30 ರಿಂದ ಸೆಮಿ-ಫೈನಲ್ ಪಂದ್ಯಗಳು ಶುರುವಾಗಲಿದ್ದು, ಹಾಲಿ ಚಾಂಪಿಯನ್ ಸೆಂಟ್ರಲ್ ಝೋನ್ ಮತ್ತು ಕಳೆದ ಬಾರಿಯ ರನ್ನರ್-ಅಪ್ ಸೌತ್ ಝೋನ್ ನೇರವಾಗಿ ಸೆಮಿಫೈನಲ್‌ಗೆ ಪ್ರವೇಶ ಪಡೆದಿವೆ.
2025-26ರ ಆವೃತ್ತಿಯನ್ನು ಸಂಪೂರ್ಣವಾಗಿ ಪ್ರೇಕ್ಷಕರಿಲ್ಲದೆ (Behind closed doors) ಬೆಂಗಳೂರಿನ CoE ನಲ್ಲಿಯೇ ನಡೆಸಲಾಗಿತ್ತು ಮತ್ತು ಪ್ರಸಾರದ ವ್ಯವಸ್ಥೆಯೂ ಮಿತವಾಗಿತ್ತು. ಇದು ಸಾಕಷ್ಟು ಟೀಕೆಗಳಿಗೆ ಕಾರಣವಾಗಿತ್ತು. ಹೀಗಾಗಿ ಬಿಸಿಸಿಐ ಈ ಬಾರಿ ಪ್ರಸಾರದ ವ್ಯಾಪ್ತಿಯನ್ನು ವಿಸ್ತರಿಸಿದೆ. ಟೂರ್ನಿಯ ಎಲ್ಲಾ ಪಂದ್ಯಗಳು ಆನ್‌ಲೈನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿವೆ. ಅಲ್ಲದೆ, ಒಂದು ಕ್ವಾರ್ಟರ್ ಫೈನಲ್, ಒಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯ ಟಿವಿಯಲ್ಲೂ ನೇರ ಪ್ರಸಾರಗೊಳ್ಳಲಿದೆ.
ದುಲೀಪ್ ಟ್ರೋಫಿ ವೇಳಾಪಟ್ಟಿ:
- ಕ್ವಾರ್ಟರ್ ಫೈನಲ್ಸ್ (ಆಗಸ್ಟ್ 23–26):
ಈಸ್ಟ್ ಝೋನ್ vs ನಾರ್ತ್ ಈಸ್ಟ್ ಝೋನ್ (ಬೆಂಗಳೂರು, CoE Ground 2)
ನಾರ್ತ್ ಝೋನ್ vs ವೆಸ್ಟ್ ಝೋನ್ (ಬೆಂಗಳೂರು, CoE Ground 1) - ಸೆಮಿ-ಫೈನಲ್ಸ್ (ಆಗಸ್ಟ್ 30–ಸೆಪ್ಟೆಂಬರ್ 2):
ಸೆಂಟ್ರಲ್ ಝೋನ್ vs TBC (ಬೆಂಗಳೂರು, CoE Ground 1)
ಸೌತ್ ಝೋನ್ vs TBC (ಬೆಂಗಳೂರು, CoE Ground 2) - ಫೈನಲ್ (ಸೆಪ್ಟೆಂಬರ್ 6–10):
TBC vs TBC (ಚೆನ್ನೈ, ಎಂ.ಎ. ಚಿದಂಬರಂ ಕ್ರೀಡಾಂಗಣ)
ಇದನ್ನೂ ಓದಿ : ಕೊಲಂಬೊ ಟೆಸ್ಟ್ : ಕುಲದೀಪ್‌ರನ್ನು ಕೈಬಿಡದಂತೆ ಗಿಲ್, ಗಂಭೀರ್‌ಗೆ ಕ್ರಿಕೆಟ್ ಪಂಡಿತರ ಕಿವಿಮಾತು


















