ಬೆಂಗಳೂರು : ನಟ ದರ್ಶನ್ ವಿರುದ್ಧದ ರೇಣುಕಾಸ್ವಾಮಿ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಿರುವ ಬೆನ್ನಲ್ಲೇ, ಪ್ರಕರಣದ ಕೇಂದ್ರಬಿಂದುವಾಗಿರುವ ಪಟ್ಟಣಗೆರೆ ಶೆಡ್ ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿರುವ ಪಟ್ಟಣಗೆರೆ ಶೆಡ್‌ಗೆ ಕೊಲೆ ಪ್ರಕರಣದ ಬಳಿಕ ದೇಶಾದ್ಯಂತ ಕುಖ್ಯಾತಿ ಬಂದಿದೆ. ಪೊಲೀಸರು ಶೆಡ್ ಅನ್ನು ಸೀಜ್ ಮಾಡಿದ್ದು, ಪ್ರಕರಣದ ತನಿಖೆಯಲ್ಲಿ ಈ ಸ್ಥಳ ಪ್ರಮುಖ ಸಾಕ್ಷ್ಯ ಕೇಂದ್ರವಾಗಿದೆ. ಆದರೆ ಇದೇ ಶೆಡ್ ಇದೀಗ ಜಿಬಿಎಗೆ ಆಸ್ತಿ ತೆರಿಗೆ ಪಾವತಿಸದಿರುವುದು ಹಾಗೂ ಬಿ-ಟು-ಎ ಖಾತೆಗಾಗಿ ಅರ್ಜಿ ಸಲ್ಲಿಸದಿರುವ ಆರೋಪದಿಂದ ಸುದ್ದಿಯಾಗಿದೆ.
ಸುಮಾರು 6.5 ಎಕರೆ ಪ್ರದೇಶದಲ್ಲಿರುವ ಪಟ್ಟಣಗೆರೆ ಶೆಡ್ ಜಯಣ್ಣ ಕುಟುಂಬದ ಹೆಸರಿನಲ್ಲಿದೆ ಎನ್ನಲಾಗಿದ್ದು, ಇದುವರೆಗೆ ಆಸ್ತಿ ತೆರಿಗೆ ಪಾವತಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಜಿಬಿಎ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ, ತೆರಿಗೆ ಪಾವತಿಗೆ ಮಾಲೀಕರು ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇನ್ನೊಂದೆಡೆ, ಶೆಡ್‌ಗೆ ರಸ್ತೆ, ವಿದ್ಯುತ್, ಚರಂಡಿ ಸೇರಿದಂತೆ ಸರ್ಕಾರ ಹಾಗೂ ಸ್ಥಳೀಯ ಆಡಳಿತದಿಂದ ಒದಗಿಸಲಾಗುವ ಮೂಲಸೌಕರ್ಯಗಳು ಲಭ್ಯವಾಗಿವೆ. ಸಾರ್ವಜನಿಕ ಸೌಲಭ್ಯಗಳನ್ನು ಬಳಸಿಕೊಂಡು ತೆರಿಗೆ ಪಾವತಿ ವಿಚಾರದಲ್ಲಿ ಮಾತ್ರ ಹಿಂದೇಟು ಏಕೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕೊಲೆ ಪ್ರಕರಣ ನಡೆದು ಎರಡು ವರ್ಷಗಳು ಕಳೆದರೂ ಶೆಡ್‌ಗೆ ಸಂಬಂಧಿಸಿದ ಆಸ್ತಿ ತೆರಿಗೆ ಮತ್ತು ಖಾತೆ ವಿಚಾರ ಇನ್ನೂ ಬಗೆಹರಿದಿಲ್ಲ ಎನ್ನಲಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮಾಲೀಕರು ಇಷ್ಟೊಂದು ಪ್ರಭಾವಶಾಲಿಗಳೇ? ತೆರಿಗೆ ವಸೂಲಿ ಮಾಡಲು ಜಿಬಿಎ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆಯೇ? ಅಥವಾ ಇದರ ಹಿಂದೆ ಯಾವುದಾದರೂ ರಾಜಕೀಯ ಒತ್ತಡವಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿವೆ.
ಈ ಕುರಿತು ಪಶ್ಚಿಮ ನಗರಪಾಲಿಕೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ನಾವು ನೋಟಿಸ್ ನೀಡಿದ್ದೇವೆ. ಅವರು ಸರಿಯಾಗಿ ಸ್ಪಂದಿಸಿಲ್ಲ” ಎಂಬ ಉತ್ತರ ನೀಡಿದ್ದಾರೆ. ಆದರೆ ನೋಟಿಸ್ ಪ್ರತಿಗಳನ್ನು ಮಾಧ್ಯಮದವರಿಗೆ ನೀಡಲು ಸಾಧ್ಯವಿಲ್ಲ ಎಂದು ಪಶ್ಚಿಮ ನಗರಪಾಲಿಕೆ ವ್ಯಾಪ್ತಿಯ ಅರ್ ಅರ್ ನಗರದ ಕಂದಾಯ ಇಲಾಖೆ ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಹಾಗಾದರೆ ನೋಟಿಸ್ ನೀಡಿದ್ದರೆ ಅದರ ಪ್ರತಿಯನ್ನು ಬಹಿರಂಗಪಡಿಸಲು ಅಧಿಕಾರಿಗಳಿಗೆ ಏಕೆ ಹಿಂಜರಿಕೆ? ತೆರಿಗೆ ವಸೂಲಿ ವಿಚಾರದಲ್ಲಿ ಅಧಿಕಾರಿಗಳ ಮೇಲೆ ಯಾವುದಾದರೂ ಒತ್ತಡವಿದೆಯೇ? ದರ್ಶನ್ ಅಭಿಮಾನಿಗಳ ಭಯವೇ? ಅಥವಾ ಪ್ರಕರಣದ ಹಿನ್ನೆಲೆಯಿಂದಾಗಿ ಯಾರಿಗಾದರೂ ಪರೋಕ್ಷ ಅನುಕೂಲ ಮಾಡಿಕೊಡಲಾಗುತ್ತಿದೆಯೇ? ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಇಡೀ ದೇಶವೇ ತಿರುಗಿ ನೋಡುವಂತಾಗಿದ್ದ ಪಟ್ಟಣಗೆರೆ ಶೆಡ್, ಇದೀಗ ಜಿಬಿಎ ತೆರಿಗೆ ವಸೂಲಿ ಮತ್ತು ಖಾತೆ ವಿಚಾರದಲ್ಲೂ ಅಧಿಕಾರಿಗಳ ಗಮನ ಸೆಳೆಯುತ್ತಿದೆಯೇ? ಎಂಬ ಕುತೂಹಲ ಮೂಡಿಸಿದೆ. ಆಸ್ತಿ ತೆರಿಗೆ ಪಾವತಿ, ಖಾತೆ ಸ್ಥಿತಿ ಹಾಗೂ ಅಧಿಕಾರಿಗಳು ನೀಡಿರುವ ನೋಟಿಸ್‌ಗಳ ಕುರಿತು ಜಿಬಿಎ ಸ್ಪಷ್ಟ ಮಾಹಿತಿ ನೀಡಬೇಕೆಂಬ ಜನ ಆಗ್ರಹವೂ ಕೇಳಿಬರುತ್ತಿದೆ.
ಇತ್ತ ಬಡವರ ಮನೆ, ನಿವೇಶನಕ್ಕೆ ತೆರಿಗೆ ಕಟ್ಟಿಲ್ಲ ಎಂದರೆ ಕಟ್ಟಡ ಹರಾಜು ಹಾಕಿ ತೆರಿಗೆ ವಸೂಲಿ ಮಾಡುವ ನಮ್ಮ ಜಿಬಿಎ ಅಧಿಕಾರಿಗಳು, ಈ ಸ್ವತ್ತಿಗೆ ತೆರಿಗೆ ವಸೂಲುಗೆಕ್ಕೆ ಎಷ್ಟೊಂದು ಪ್ರೀತಿ ಎಂಬ ಮಾತು ಸಾರ್ವಜನಿಕರ ವಲಯದಲ್ಲಿ ಕೇಳಿ ಬರ್ತಿದೆ. ಇನ್ನಾದರೂ ಅಧಿಕಾರಿಗಳು ಎಲ್ಲರಿಗೂ ಒಂದೇ ನ್ಯಾಯ ಅನ್ನೋ ರೀತಿಯಲ್ಲಿ ತೆರಿಗೆ ವಸೂಲಿ ಮಾಡಬೇಕು ಎಂಬುವುದು ಜನರ ಆಶಯ.
ಇದನ್ನೂ ಓದಿ : KPSC ಹಗರಣ ; ಮಾಜಿ ಅಧ್ಯಕ್ಷ ಶಿವಶಂಕರಪ್ಪ ಮನೆ ಸೇರಿ 13 ಕಡೆ ED ರೇಡ್!



















