ಬೈಂದೂರು : ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದಲ್ಲಿ ಸೋಮವಾರ ನಾಗರ ಪಂಚಮಿ ಅಂಗವಾಗಿ ನಾಗ ದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ 11ನೇ ವರ್ಷದ ನಾಗಾನುಗ್ರಹ ಪ್ರಶಸ್ತಿ ಪ್ರಧಾನ ಸಮಾರಂಭ ದೇವಸ್ಥಾನದ ಆವರಣದಲ್ಲಿ ನಡೆಯಿತು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಾಗ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಮರವಂತೆ ವರಾಹ ದೇವಸ್ಥಾನದ ಮಾಜಿ ಧರ್ಮದರ್ಶಿ ಸತೀಶ್ ಎಂ. ನಾಯಕ್ ಧಾರ್ಮಿಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ದೇವರ ಮೇಲೆ ನಂಬಿಕೆ ಇಟ್ಟು, ಸತ್ಕಾರ್ಯಗಳನ್ನು ಮಾಡುತ್ತಾ ಧೈರ್ಯದಿಂದ ಮುಂದೆ ಸಾಗಬೇಕು ಎಂದು ಹೇಳಿದರು. ನಾಗ ದೇವರ ಆರಾಧನೆಯು ನಮ್ಮಲ್ಲಿ ಪ್ರಕೃತಿ ಹಾಗೂ ಜೀವಜಾಲದ ಬಗ್ಗೆ ಗೌರವವನ್ನು ಬೆಳೆಸುತ್ತದೆ ಎಂದು ಅವರು ತಿಳಿಸಿದರು.
ಶೃಂಗೇರಿ ಶಾರದಾ ಪೀಠದ ಪ್ರಾಂತೀಯ ಧರ್ಮಾಧಿಕಾರಿ ವೇದಮೂರ್ತಿ ಲೋಕೇಶ ಅಡಿಗ ನಾಗಾನುಗ್ರಹ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾಗ ದೇವರಿಗೆ ವಿಶೇಷ ಸ್ಥಾನವಿದೆ. ನಾಗ ದೇವರನ್ನು ಭಕ್ತಿ, ಶ್ರದ್ಧೆ ಹಾಗೂ ನಂಬಿಕೆಯಿಂದ ಆರಾಧಿಸಿದರೆ ಮನಸ್ಸಿಗೆ ಧೈರ್ಯ ಮತ್ತು ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ನಮ್ಮ ಹಿರಿಯರಿಂದ ಬಂದಿದೆ. ದೇವರ ಸೇವೆಯನ್ನು ನಿರಂತರವಾಗಿ ಮಾಡುವವರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ಹಣ ಎಷ್ಟು ಇದ್ದರೂ ಮುಖ್ಯವಲ್ಲ, ಕೊಡುವ ಮನಸ್ಸು ಮುಖ್ಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕಾರ್ಮಿಕರ ಪರಿಷತ್ತು, ಬೆಂಗಳೂರು ಇದರ ಅಧ್ಯಕ್ಷ ರವಿ ಶೆಟ್ಟಿ ಬೈಂದೂರು ಅವರು ನಾಗಾನುಗ್ರಹ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ತಾವು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದರೂ ದೇವರ ಹೆಸರಿನಲ್ಲಿ ಪ್ರಶಸ್ತಿ ಪಡೆದಿರುವುದು ಇದೇ ಮೊದಲು ಎಂದು ಸಂತಸ ವ್ಯಕ್ತಪಡಿಸಿದರು. ದೇವರಲ್ಲಿ ನಂಬಿಕೆ ಇಟ್ಟರೆ ಅಸಾಧ್ಯವೂ ಸಾಧ್ಯವಾಗುತ್ತದೆ. ನಮ್ಮ ಪ್ರಯತ್ನಕ್ಕೆ ದೇವರ ಆಶೀರ್ವಾದ ಸೇರಿದರೆ ಯಶಸ್ಸು ಖಚಿತ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಭಯಪಡದೆ ನಾಗ ದೇವರ ಮೇಲೆ ನಂಬಿಕೆ ಇಟ್ಟು ಒಳ್ಳೆಯ ಕಾರ್ಯಗಳನ್ನು ಮಾಡುತ್ತಾ ಮುಂದೆ ಸಾಗಬೇಕು ಎಂದು ಹೇಳಿದರು. ಭಕ್ತಿ ಎಂದರೆ ಕೇವಲ ಪೂಜೆ ಮಾಡುವುದಲ್ಲ; ಸತ್ಯ, ಧರ್ಮ, ದಯೆ ಮತ್ತು ಒಳ್ಳೆಯತನದ ದಾರಿಯಲ್ಲಿ ನಡೆಯುವುದೂ ಭಕ್ತಿಯೇ ಎಂದು ತಿಳಿಸಿದರು.

ಮರವಂತೆ ಸುಬ್ರಹ್ಮಣ್ಯ, ವಿದ್ಯಾಗಣಪತಿ, ನವಗ್ರಹ ದೇವಸ್ಥಾನದ ಅಧ್ಯಕ್ಷ ತಿಮ್ಮ ವಿ. ದೇವಾಡಿಗ ಅವರು ನಾಗಾನುಗ್ರಹ ಪ್ರಶಸ್ತಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೋಟೇಶ್ವರದ ವಾಸ್ತು ತಜ್ಞ, ಯಕ್ಷಗಾನ ಪ್ರಸಂಗಕರ್ತ ಹಾಗೂ ಜ್ಯೋತಿಷಿ ಡಾ. ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಪ್ರವಚನ ನೀಡಿದರು.
ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಕೊಲ್ಲೂರು ದೇವಸ್ಥಾನದ ಮಾಜಿ ಧರ್ಮದರ್ಶಿ ಜಯರಾಮ ಶೆಟ್ಟಿ ವಂಡಬಳ್ಳಿ, ಕುಂದಾಪುರ ಉದ್ಯಮಿ ಅಶೋಕ್ ಶೆಟ್ಟಿ ಸಂಸಾಡಿ, ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷೆ ಅನಿತಾ ಆರ್.ಕೆ. ಮರವಂತೆ, ನಾವುಂದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನರಸಿಂಹ ದೇವಾಡಿಗ, ಗೋವಾ ಉದ್ಯಮಿ ಸತೀಶ್ ಪೂಜಾರಿ ಮರವಂತೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗೌರವ ಸಲಹೆಗಾರ ಸಿ.ಎಸ್. ಖಾರ್ವಿ ಕೊಡೇರಿ ಸ್ವಾಗತಿಸಿದರು. ದೇವಸ್ಥಾನದ ಧರ್ಮದರ್ಶಿ ತಿಮ್ಮ ವಿ. ದೇವಾಡಿಗ ಪ್ರಾಸ್ತಾವಿಕ ಮಾತನಾಡಿದರು. ಕೆರ್ಗಾಲ್ ಬನಗಲ್ ಹಾಡಿ ವನದುರ್ಗಾ ದೇವಿ ದೇವಸ್ಥಾನದ ಕಾರ್ಯದರ್ಶಿ ಗೋವಿಂದ ಎಂ. ಮಟ್ನಕಟ್ಟೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಇದನ್ನೂ ಓದಿ : ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆ ಹೊಂದಿದವರಿಗೆ ಗುಡ್ ನ್ಯೂಸ್ : ಈಗ ಎಲ್ಲರಿಗೂ ವಿಮೆ ಸೌಲಭ್ಯ



















