ನವದೆಹಲಿ : ಚಲನಚಿತ್ರ ರಂಗದ ಉದಯೋನ್ಮುಖ ನಟಿ ಅನನ್ಯಾ ರಾಜ್ (35) ಅವರು ಜುಲೈ 15 ರಂದು ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಅವರ ಕುಟುಂಬಸ್ಥರು ಸಾಮಾಜಿಕ ಜಾಲತಾಣದ ಮೂಲಕ ತಡವಾಗಿ ಬಹಿರಂಗಪಡಿಸಿದ್ದಾರೆ. ‘ತಗ್ಗೇದೇ ಲೇ’, ‘7 ಅವರ್ಸ್ ಟು ಗೋ’ ಹಾಗೂ ‘ಘೋಸ್ಟ್’ ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಯುವ ನಟಿಯ ಅಕಾಲಿಕ ಮರಣವು ಚಿತ್ರರಂಗಕ್ಕೆ ತೀವ್ರ ದಿಗ್ಭ್ರಮೆ ತಂದಿದೆ.
ಅನಾರೋಗ್ಯದಿಂದ ಬೇಸತ್ತಿದ್ದ ನಟಿ
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಅನನ್ಯಾ ಕುಟುಂಬಸ್ಥರು ಭಾನುವಾರ ನೀಡಿರುವ ಪ್ರಕಟಣೆಯ ಪ್ರಕಾರ, ನಟಿ ಅನನ್ಯಾ ರಾಜ್ ಅವರು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ತೀವ್ರ ಸ್ವರೂಪದ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಈ ಕಷ್ಟಕರ ಪರಿಸ್ಥಿತಿಯನ್ನು ಎದುರಿಸಲು ಅವರು ಕೊನೆಯವರೆಗೂ ದಿಟ್ಟತನದಿಂದ ಹೋರಾಟ ನಡೆಸಿದ್ದರು. ಜುಲೈ 15 ರಂದು ಬೆಳಗಿನ ಜಾವ ಅವರು ನಿದ್ರೆಯಲ್ಲಿಯೇ ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಂತಿಮ ಸಂಸ್ಕಾರದ ಚಿತ್ರಗಳನ್ನು ಹಂಚಿಕೊಂಡ ಕುಟುಂಬ
ನಟಿ ಅಗಲಿ ಒಂದು ತಿಂಗಳು ಕಳೆದ ನಂತರ, ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಂತಿಮ ಸಂಸ್ಕಾರದ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ. ಅನನ್ಯಾ ಒಬ್ಬ ಅತ್ಯಂತ ಆತ್ಮವಿಶ್ವಾಸ ಮತ್ತು ದೃಢ ಮನಸ್ಸಿನ ಹೆಣ್ಣುಮಗಳಾಗಿದ್ದು, ರಾಜಕುಮಾರಿಯಂತೆ ಜೀವನ ನಡೆಸಿದ್ದರು ಎಂದು ಅವರ ಕುಟುಂಬ ನೆನಪಿಸಿಕೊಂಡಿದೆ. ಪ್ರಸ್ತುತ ಈ ಕಠಿಣ ಸಮಯದಲ್ಲಿ ಕುಟುಂಬದ ಖಾಸಗಿತನಕ್ಕೆ ಗೌರವ ನೀಡುವಂತೆ ಅಭಿಮಾನಿಗಳು ಹಾಗೂ ಮಾಧ್ಯಮಗಳಲ್ಲಿ ವಿನಂತಿಸಿಕೊಳ್ಳಲಾಗಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸುವಂತೆ ಕೋರಲಾಗಿದೆ.
ಚಿತ್ರರಂಗದಲ್ಲಿ ಅನನ್ಯಾ ರಾಜ್ ಪಯಣ
ಅನನ್ಯಾ ರಾಜ್ ಕೇವಲ ಸಿನಿಮಾಗಳಷ್ಟೇ ಅಲ್ಲದೆ, ‘ದಿ ಫೈನಲ್ ಎಕ್ಸಿಟ್’ ನಂತಹ ಚಲನಚಿತ್ರಗಳು ಹಾಗೂ ಟಿ-ಸಿರೀಸ್ (T-Series), ಝೀ ಮ್ಯೂಸಿಕ್ (Zee Music) ಮತ್ತು ಟೈಮ್ಸ್ ಮ್ಯೂಸಿಕ್ (Times Music) ನಂತಹ ಪ್ರಮುಖ ಮ್ಯೂಸಿಕ್ ಲೇಬಲ್‌ಗಳ ಅಡಿಯಲ್ಲಿ ನಿರ್ಮಾಣಗೊಂಡ ಹಲವು ಜನಪ್ರಿಯ ಸಂಗೀತ ವೀಡಿಯೋಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದರು. ಅವರ ಅಕಾಲಿಕ ಅಗಲಿಕೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ : ‘ದಿಮಾಗಿ ನಕ್ಸಲ್ ಪಾರ್ಟಿ’ ಇನ್‌ಸ್ಟಾ ಖಾತೆಗೆ ಒಂದೇ ದಿನದಲ್ಲಿ 1.6 ಲಕ್ಷ ಫಾಲೋವರ್ಸ್ : ಹೊಸ ಸಂಚಲನ!



















